ಮುಂಬೈ

ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿ ಅರ್ನಬ್​ ಗೋಸ್ವಾಮಿ ವಿರುದ್ಧದ ಆರೋಪದಲ್ಲಿ ಸತ್ಯಾಂಶವಿದೆ: ಕೋರ್ಟ್​ಗೆ​ ಪೊಲೀಸರು

Pinterest LinkedIn Tumblr


ಮುಂಬೈ: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್​ ಟಿ.ವಿ.ಸಂಪಾದಕ ಅರ್ನಬ್​ ಗೋಸ್ವಾಮಿ ಅವರ ವಿರುದ್ಧ ಬಂದಿರುವ ಗಂಭೀರ ಆರೋಪದಲ್ಲಿ ಸತ್ಯಾಂಶವಿದೆ ಎಂದು ಮುಂಬೈ ಪೊಲೀಸರು ಕೋರ್ಟ್​ಗೆ ತಿಳಿಸಿದ್ದಾರೆ.

ಟೆಲಿವಿಷನ್ ರೇಟಿಂಗ್ ಪಾಯಿಂಟ್‌’ (ಟಿಆರ್‌ಪಿ) ತಿರುಚಲು ಅವರು ಲಕ್ಷ ಲಕ್ಷ ರೂಪಾಯಿಗಳ ಲಂಚ ನೀಡಿರುವುದಾಗಿ ಪೊಲೀಸರು ಮ್ಯಾಜಿಸ್ಟ್ರೇಟ್​ ಕೋರ್ಟ್​ ಮುಂದೆ ಮಾಹಿತಿ ನೀಡಿದ್ದಾರೆ.

ಟಿಆರ್​ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ವಾರ ಬಂಧಿತರಾಗಿದ್ದ ಬ್ರಾಡ್ ಕಾಸ್ಟ್‌ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಹಲವು ಮಾಹಿತಿಗಳನ್ನು ತಮಗೆ ನೀಡಿರುವುದಾಗಿ ಅವರು ಹೇಳಿದ್ದಾರೆ. ದಾಸ್‌ಗುಪ್ತಾ ಅವರನ್ನು ಟಿಆರ್‌ಪಿ ಹಗರಣದ ‘ಮಾಸ್ಟರ್‌ ಮೈಂಡ್‌’ ಎಂದು ಹೇಳಲಾಗಿದೆ.

ಯಾವುದೇ ಟಿ.ವಿ.ಚಾನೆಲ್​ಗೆ ಟಿಆರ್​ಪಿಯೇ ಜೀವಾಳ. ಇದರ ಆಧಾರದ ಮೇಲೆಯೇ ಚಾನೆಲ್​ಗಳಿಗೆ ಜಾಹೀರಾತು ಬರುವುದು. ಇದರಿಂದಲೇ ಚಾನೆಲ್​ಗಳು ಆದಾಯ ಗಳಿಸುವುದು. ಈ ಸಂದರ್ಭ ಹೆಚ್ಚು ಹೆಚ್ಚು ಟಿಆರ್​ಪಿ ಗಳಿಸಲು ಅರ್ನಬ್​ ಲಂಚ ನೀಡಿರುವ ಆರೋಪವಿದೆ.

ಕಳೆದ ವಾರ ಪೊಲೀಸರು ಪುಣೆಯಲ್ಲಿ ದಾಸ್ ಗುಪ್ತಾರನ್ನು ಬಂಧಿಸಿದ್ದು, ಅವರ ಮನೆಯಿಂದ ಮೂರು ಕೆಜಿ ಬೆಳ್ಳಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಈ ದುಬಾರಿ ವಸ್ತುಗಳನ್ನು ಅರ್ನಬ್ ಗೋಸ್ವಾಮಿ ನೀಡಿದ ಹಣದಿಂದಲೇ ಖರೀದಿಸಿದ್ದು ಎಂದು ಅವರು ಹೇಳಿದ್ದಾರೆ ಎಂದಿದ್ದಾರೆ ಪೊಲೀಸರು.

‘ದಾಸ್‌ಗುಪ್ತಾ ತಮ್ಮ ಸ್ಥಾನ ದುರುಪಯೋಗ ಮಾಡಿಕೊಂಡು ‘ಎಆರ್‌ಜಿ ಔಟ್‌ಲೈರ್‌ ಮೀಡಿಯಾ ಪ್ರೈವೇಟ್ ಲಿಮಿಟೆಡ್’ನ ‘ರಿಪಬ್ಲಿಕ್ ಭಾರತ್ ಹಿಂದಿ’ ಮತ್ತು ‘ರಿಪಬ್ಲಿಕ್ ಟಿವಿ ಇಂಗ್ಲಿಷ್‌’ ಸೇರಿದಂತೆ ನಿರ್ದಿಷ್ಟ ಟಿ.ವಿ.ಚಾನೆಲ್​ನ ಟಿಆರ್‌ಪಿ ತಿರುಚಿದ್ದಾರೆ. ದಾಸ್‌ಗುಪ್ತಾ ಬಾರ್ಕ್ ಅವರು 2013ರಿಂದ 2019ರ ಅವಧಿಯಲ್ಲಿ ಬಾರ್ಕ್ ಸಿಇಒ ಆಗಿದ್ದು, ಆ ವೇಳೆ ಅರ್ನಬ್ ಗೋಸ್ವಾಮಿ ಮತ್ತು ಇತರರೊಂದಿಗೆ ಸೇರಿ ಈ ಸಂಚು ನಡೆಸಿದ್ದರು,’ ಎಂದು ಪೊಲೀಸರು ತಮ್ಮ ಟಿಪ್ಪಣಿಯಲ್ಲಿ ಆರೋಪಿಸಿದ್ದಾರೆ.

ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 15 ಮಂದಿ ಬಂಧಿಸಲಾಗಿದೆ. ಸದ್ಯಕ್ಕೆ ದಾಸ್ ಗುಪ್ತಾ ಪೊಲೀಸ್ ಕಸ್ಟಡಿಯನ್ನು ಡಿ.30ರವರೆಗೂ ವಿಸ್ತರಿಸಲಾಗಿದೆ.

Comments are closed.