ಮುಂಬೈ

ವಿಧಾನಪರಿಷತ್ ಚುನಾವಣೆ: ಬಿಜೆಪಿಗೆ ಭಾರೀ ಹಿನ್ನಡೆ, 5 ಕ್ಷೇತ್ರದಲ್ಲಿ ಜಯಿಸಿದ ಮಹಾಮೈತ್ರಿಕೂಟ

Pinterest LinkedIn Tumblr


ಮುಂಬೈ: ಮಹಾರಾಷ್ಟ್ರ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು, ಆಡಳಿತಾರೂಢ ಮಹಾಮೈತ್ರಿಕೂಟಕ್ಕೆ ಜಯ ಸಾಧಿಸಿದೆ. ವಿಧಾನಪರಿಷತ್ ನ 5 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಮಹಾರಾಷ್ಟ್ರದ ಧುಲೇ-ನಂದುರ್ಬಾರ್ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಜಯ ಸಾಧಿಸಿದೆ ಎಂದು ವರದಿ ತಿಳಿಸಿದೆ. ಭಾರತೀಯ ಜನತಾ ಪಕ್ಷದ ಅಮರೀಶ್ ರಷಿಕಲಾಲ್ ಪಟೇಲ್ ದುಲೇ ನಂದುರ್ಬಾರ್ ಪದವೀಧರ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಲ್ಲಿದ್ದ ಪಟೇಲ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು.

ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಶರದ್ ಪವಾರ್ ನೇತೃತ್ವದ ಎನ್ ಸಿಪಿ ರಾಜ್ಯ ಮೇಲ್ಮನೆ ಚುನಾವಣೆಯಲ್ಲಿ ಔರಂಗಬಾದ್ ಮತ್ತು ಪುಣೆ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ ಎಂದು ವರದಿ ಹೇಳಿದೆ.

ಎನ್ ಸಿಪಿಯ ಸತೀಶ್ ಚವಾಣ್ ಔರಂಗಬಾದ್ ಪದವೀಧರ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಬಿಜೆಪಿಯ ಶಿರೀಶ್ ಬೋರಾಲ್ಕಾರ್ ಅವರನ್ನು ಪರಾಜಯಗೊಳಿಸಿದ್ದಾರೆ. ಚವಾಣ್ ಪರವಾಗಿ 1,16,638 ಮತ ಚಲಾವಣೆಯಾಗಿದ್ದರೆ, ಬೋರಾಲ್ಕಾರ್ 58, 743 ಮತ ಪಡೆದಿರುವುದಾಗಿ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದರು.

ಪುಣೆ ವಿಭಾಗದ ಪದವೀಧರ ಕ್ಷೇತ್ರದಲ್ಲಿ ಎನ್ ಸಿಪಿಯ ಅರುಣ್ ಲಾಡ್ ಪ್ರತಿಸ್ಪರ್ಧಿ ಬಿಜೆಪಿಯ ಸಂಗ್ರಾಮ್ ದೇಶ್ ಮುಖ್ ಅವರನ್ನು ಸೋಲಿಸಿದ್ದಾರೆ. ಲಾಡ್ ಪರವಾಗಿ 1,22,145 ಮತ ಚಲಾವಣೆಯಾಗಿದ್ದು, ದೇಶ್ ಮುಖ್ 73,321 ಮತ ಪಡೆದಿರುವುದಾಗಿ ವರದಿ ವಿವರಿಸಿದೆ.

ಪುಣೆ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಸೋಲನ್ನನುಭವಿಸಿರುವುದು ಪಕ್ಷದ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪುಣೆ ಸ್ಥಾನ ಗೆಲ್ಲಲು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜತೆಗೂಡಿ ಭರ್ಜರಿ ಪ್ರಚಾರ ನಡೆಸಿದ್ದರು.

Comments are closed.