
ಮುಂಬೈ: ಸುಪ್ರಸಿದ್ಧ ಹಿಂದಿ ಧಾರಾವಾಹಿ ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ ಇದರ ಲೇಖಕರಲ್ಲಿ ಒಬ್ಬರಾಗಿರುವ ಅಭಿಷೇಕ್ ಮಕ್ವಾನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೈಬರ್ ವಂಚನೆ ಮತ್ತು ಬ್ಲ್ಯಾಕ್‌ಮೇಲ್ ಹಿನ್ನೆಲೆಯಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಅಭಿಷೇಕ್ ನವೆಂಬರ್ 27ರಂದು ಮುಂಬೈನ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಬರೆದಿರುವ ಡೆತ್ನೋಟ್ನಲ್ಲಿ ಆರ್ಥಿಕ ತೊಂದರೆಯಿಂದ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಭಿಷೇಕ್ ತೀವ್ರ ಸಾಲ ಮಾಡಿಕೊಂಡಿದ್ದರು. ಸಾಲವನ್ನು ಮರುಪಾವತಿಸಬೇಕೆಂದು ಒತ್ತಾಯಿಸಿ ಅನೇಕ ಕರೆಗಳು ಬರುತ್ತಿದ್ದವು. ಬೆದರಿಕೆಯನ್ನೂ ಹಾಕಲಾಗುತ್ತಿತ್ತು ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ. ಫೋನ್ ಕರೆಗಳನ್ನು ಅಭಿಷೇಕ್ ಸ್ವೀಕರಿಸುತ್ತಿರಲಿಲ್ಲ. ಒಮ್ಮೆ ನಾನು ಸ್ವೀಕರಿಸಿದಾಗ ಸಾಲ ಮರುಪಾವತಿ ಮಾಡುವಂತೆ ಬೆದರಿಕೆ ಹಾಕಲಾಗಿತ್ತು ಎಂದು ಸಹೋದರ ಜೆನಿಸ್ ಹೇಳಿದ್ದಾರೆ.
ಭಾರತದ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೇ ಬಾಂಗ್ಲಾದೇಶ್, ಮ್ಯಾನ್ಮಾರ್ನಿಂದಲೂ ಕರೆ ಬಂದಿರುವುದು ಆತನ ಫೋನ್ ಪರಿಶೀಲಿಸಿದಾಗ ತಿಳಿದುಬಂದಿದೆ. ಇಷ್ಟೊಂದು ಸಾಲ ಏಕೆ ಮಾಡಿಕೊಂಡ ಎನ್ನುವುದು ನಮಗೆ ತಿಳಿದಿಲ್ಲ. ಆತನ ಇ-ಮೇಲ್ಗಳನ್ನು ಪರಿಶೀಲನೆ ಮಾಡಿದಾಗ, ಅಲ್ಲಿಯೂ ಬೆದರಿಕೆಯ ಮೇಲ್ಗಳು ಬಂದಿವೆ. ಅತಿ ಹೆಚ್ಚಿನ ಬಡ್ಡಿದರಕ್ಕೆ ಸಾಲವನ್ನೂ ಕೂಡ ಪಡೆದಿದ್ದ ಎಂದು ಜೆನಿಸ್ ಹೇಳಿದ್ದಾರೆ.
2020ರಲ್ಲಿ ಗೂಗಲ್ನಲ್ಲಿಯೂ ಹುಡುಕಾಡಿದ ಟಾಪ್ ಧಾರಾವಾಹಿಗಳಲ್ಲಿ ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ ಒಂದಾಗಿರುವುದಾಗಿ ಗೂಗಲ್ ಹೇಳಿದೆ.
Comments are closed.