ಮುಂಬೈ

ಕರಾಚಿ ಸ್ವೀಟ್ಸ್ ಮಾಲೀಕರಿಗೆ ಶಿವಸೇನೆಯಿಂದ ಹೆಸರು ಬದಲಾಯಿಸಲು ಬೆದರಿಕೆ

Pinterest LinkedIn Tumblr


ಮುಂಬೈ: ಕರಾಚಿ ಸ್ವೀಟ್ಸ್ ಎಂಬ ಹೆಸರನ್ನು ಶೀಘ್ರ ಬದಲಾವಣೆ ಮಾಡುವಂತೆ ಮುಂಬೈನ ಕರಾಚಿ ಬೇಕರಿ ಮಾಲೀಕರಿಗೆ ಶಿವಸೇನೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಹೌದು.. ಕರಾಚಿ ಬೇಕರಿ ಹೆಸರನ್ನು ಮರಾಠಿಗೆ ಬದಲಾಯಿಸುವಂತೆ ಶಿವಸೇನೆ ಒತ್ತಡ ಹಾಕಿದ್ದು, ಈ ಕುರಿತು ಶಿವಸೇನಾ ನಾಯಕ ನಿತಿನ್ ನಂದಗಾಂವ್‌ಕರ್ ಎಂಬುವವರು ಕರಾಚಿ ಬೇಕರಿಗೆ ಬಂದು ಹೆಸರು ಬದಲಿಸುವಂತೆ ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಿಢೀರನೆ ಕರಾಚಿ ಸ್ವೀಟ್ಸ್ ಅಂಗಡಿಗೆ ಧಾವಿಸಿದ ಶಿವಸೇನೆ ಮುಖಂಡ ನಿತಿನ್ ನಂದಗಾಂವ್‌ಕರ್ ಮತ್ತು ಇತರರು ಕರಾಚಿ ಎಂಬುದು ಪಾಕಿಸ್ತಾನದ ಹೆಸರಾಗಿದ್ದು, ಕೂಡಲೇ ಅದನ್ನು ಬದಲಿಸಿ. ಮುಂಬೈನಲ್ಲಿ ಪಾಕಿಸ್ತಾನದ ಹೆಸರನ್ನು ನಾವು ಸಹಿಸಿಕೊಳ್ಳುವುದಿಲ್ಲ. ಹೀಗಾಗಿ ಕೂಡಲೇ ಹೆಸರು ಬದಲಿಸಿ. ಅಲ್ಲದೆ ನೂತನ ಹೆಸರನ್ನು ಮರಾಠಿಯಲ್ಲಿ ಬರೆಸಬೇಕು. ಇವಲ್ಲವಾದಲ್ಲಿ ಕಠಿಣಕ್ರಮ ಜರುಗಿಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ‘ನಾವು ನಿಮಗೆ ಕಾಲಾವಕಾಶ ಕೊಡುತ್ತೇವೆ, ಅಷ್ಟೊರೊಳಗೆ ನೀವು ಕರಾಚಿ ಬೇಕರಿ ಹೆಸರನ್ನು ಬದಲಿಸಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ನಿತಿನ್ ನಂದಗಾಂವ್‌ಕರ್ ಅವರ ಕೃತ್ಯವನ್ನು ಸ್ವತಃ ಶಿವಸೇನೆ ಮುಖಂಡ ಸಂಜಯ್ ರಾವತ್ ಟೀಕಿಸಿದ್ದಾರೆ. ಅಂತೆಯೇ ಇದು ಶಿವಸೇನೆ ಅಧಿಕೃತ ಒತ್ತಡವಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ. ಇನ್ನು ನಿತಿನ್ ನಂದಗಾಂವ್‌ಕರ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ನಿತಿನ್ ನಂದಗಾಂವ್‌ಕರ್ ಅವರ ಬೇಡಿಕೆಯಲ್ಲಿ ತಪ್ಪಿಲ್ಲ. ಭಾರತದಲ್ಲಿರುವ ಪಾಕಿಸ್ತಾನದ ಹೆಸರು ಸಹಿಸಲಸಾಧ್ಯ, ಅವರೂ ಕೂಡ ಭಾರತೀಯರ ಭಾವನೆಗಳಿಗೆ ಬೆಲೆ ನೀಡಿ ಹೆಸರು ಬದಲಿಸಬೇಕು ಎಂದು ಹೇಳಿದ್ದಾರೆ.

ಈ ಹಿಂದೆಯೂ ಕೂಡ ಕರಾಚಿ ಬೇಕರಿಗೆ ಹೆಸರು ಬದಲಿಸುವ ಕುರಿತು ಸಾಕಷ್ಟು ಬಾರಿ ಬೆದರಿಕೆ ಕರೆಗಳು ಬಂದಿದ್ದವು, 2019ರಲ್ಲಿ ಬೆಂಗಳೂರಿನಲ್ಲಿ ಕರಾಚಿ ಬೇಕರಿ ಮಾಲೀಕರೊಬ್ಬರಿಗೆ 24 ಗಂಟೆಯಲ್ಲಿ ಬೇಕರಿ ಹೆಸರು ಬದಲಾಯಿಸುವಂತೆ ಭೂಗತ ಪಾತಕಿ ಮಿಕ್ಕಿಶೆಟ್ಟಿ ಎಂಬ ಹೆಸರಿನಲ್ಲಿ ಬೆದರಿಕೆ ಕರೆ ಬಂದಿತ್ತು.

1953ರಲ್ಲಿ ಖಾನ್‌ಚಂದ್ ರಮ್ನಾನಿ ಎಂಬ ಸಿಂಧಿ ವಲಸಿಗ ಉದ್ಯಮಿ ಹೈದರಾಬಾದ್‌ನಲ್ಲಿ ಕರಾಚಿ ಬೇಕರಿಯನ್ನು ಆರಂಭಿಸಿದರು. 1947 ರ ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಹೈದರಾಬಾದ್‌ಗೆ ವಲಸೆ ಬಂದ ಖಾನ್‌ಚಂದ್ ರಮ್ನಾನಿ ಆರಂಭಿಸಿದ ಪ್ರಸಿದ್ಧ ಕರಾಚಿ ಬೇಕರಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಸದ್ಯ ಕರಾಚಿ ಬೇಕರಿ ಭಾರತದ ಐದು ಪ್ರಮುಖ ನಗರಗಳಾದ ಹೈದರಾಬಾದ್, ಬೆಂಗಳೂರು, ಮುಂಬಯಿ, ದೆಹಲಿ ಹಾಗೂ ಚೆನ್ನೆ ನಗರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಕರಾಚಿ ಸ್ವೀಟ್ಸ್ ಹೆಸರು ಬದಲಿಸಿ ಮರಾಠಿ ಭಾಷೆಯಲ್ಲಿ ಬೇರೆ ಹೆಸರು ಇಡುವಂತೆ ನಿತಿನ್ ನಂದಗಾಂವ್ಕರ್ ಒತ್ತಾಯಿಸಿದ್ದಾರೆ. ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪಾಕಿಸ್ತಾನದ ಕರಾಚಿ ನಗರದ ಹೆಸರು ಇಟ್ಟುಕೊಂಡು ವ್ಯಾಪಾರ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನಿತಿನ್ ನಂದಗಾಂವ್ಕರ್ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Comments are closed.