ಮುಂಬೈ

ಪತ್ನಿಯನ್ನು ತೊರೆದಿದ್ದ ಉದ್ಯಮಿ ಪತಿ: ಹೆಂಡತಿಗೆ 1.5 ಲಕ್ಷ ರೂ. ಪರಿಹಾರಕ್ಕೆ ನ್ಯಾಯಾಲಯ ಆದೇಶ

Pinterest LinkedIn Tumblr


ಮುಂಬೈ: ಪೈಲಟ್‌ ವೃತ್ತಿಯಲ್ಲಿದ್ದ ಹೆಂಡತಿಯನ್ನು ತೊರೆದಿದ್ದ ಉದ್ಯಮಿಗೆ ಇಲ್ಲಿನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಪ್ರತಿ ತಿಂಗಳು 1.5 ಲಕ್ಷ ರೂ. ನಿರ್ವಹಣಾ ವೆಚ್ಚ ನೀಡಲು ಸೂಚಿಸಿದೆ.

ನನ್ನ ಗಂಡ ವಾರ್ಷಿಕವಾಗಿ 18 ಕೋಟಿ ರೂ. ಆದಾಯ ಹೊಂದಿದ್ದು, ಕೆಲಸ ಕಳೆದುಕೊಂಡಿರುವ ನಾನು ಅಪ್ಪನ ಆಸರೆಯಲ್ಲಿದ್ದೇನೆ ಎಂದು ಪತ್ನಿ ನ್ಯಾಯಪೀಠದ ಮುಂದೆ ಅಳಲು ತೋಡಿಕೊಂಡಿದ್ದಳು. ಕೋರ್ಟ್‌ ನೀಡಿದ ಆದೇಶದಂತೆ ಪತ್ನಿ ಅರ್ಜಿ ಸಲ್ಲಿಸಿದ ದಿನಾಂಕ ಜುಲೈ 2018 ರಿಂದ ಇಲ್ಲಿಯವರೆಗೆ ಒಟ್ಟು 42 ಲಕ್ಷ ರೂ. ಪರಿಹಾರವನ್ನು ಪತಿ ನೀಡಬೇಕಾಗಿದೆ. ಪತಿ ನಿರಂತರ ದೈಹಿಕ ಕಿರುಕುಳ ನೀಡಿದ್ದರಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಪತ್ನಿ ಉದ್ಯೋಗ ನಷ್ಟ ಅನುಭವಿಸಿದ್ದು, ಗಂಡನಿಂದ ಸೂಕ್ತ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಳು.

ಪತ್ನಿಯನ್ನು ಸಾಕುವುದು ಪತಿಯ ಕರ್ತವ್ಯ. ಆಕೆಯ ನಿತ್ಯದ ಪ್ರತಿಯೊಂದು ಅವಶ್ಯಕತೆಗಳನ್ನೂ ಪತಿಯೇ ಭರಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ. ಇನ್ನು, 2018ರಲ್ಲಿ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಮನವಿ ಸಲ್ಲಿಸಿದ್ದ ಮಹಿಳೆ ವಿರುದ್ಧ ಗಂಡ ಮತ್ತು ಅವನ ಕುಟುಂಬ ಯಾವುದೇ ಕೌಟುಂಬಿಕ ದೌರ್ಜನ್ಯ ಎಸಗದಂತೆ ನ್ಯಾಯಾಲಯ ಆದೇಶಿಸಿದೆ.

ಸುದೀರ್ಘ ಪರಿಚಯದ ನಂತರ ಮಹಿಳೆ 2016ರಲ್ಲಿ ಆ ವ್ಯಕ್ತಿಯನ್ನು ಮದುವೆಯಗಾಗಿದ್ದರು. ಆಕೆಯ ತಂದೆ ಮದುವೆ ವೆಚ್ಚಗಳನ್ನು ಭರಿಸಿದ್ದು, ಉಡುಗೊರೆ ಜೊತೆಗೆ ಪತಿಯ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಆದರೆ, ಮದುವೆ ಬಳಿಕ ಪತಿ ಮದ್ಯಪಾನದ ದಾಸರಾದರು ಎಂದು ಮಹಿಳೆ ಹೇಳಿದ್ದಾರೆ.

ಪತಿಯ ಚಿತ್ರಹಿಂಸೆಯಿಂದ ಮಹಿಳೆ ಅನಾರೋಗ್ಯಕ್ಕೆ ತುತ್ತಾಗಬೇಕಾಯಿತು. ಅದರಿಂದ ಅವರು ಕೆಲಸ ಮಾಡುತ್ತಿದ್ದ ಕಂಪನಿ ಅವರನ್ನು ಕೆಲಸದಿಂದ ತೆಗೆದುಹಾಕಿದೆ. ಈಗ ಪತಿಯೇ ತಿಂಗಳಿಗೆ 1.5 ಲಕ್ಷ ರೂ. ನಿರ್ವಹಣಾ ವೆಚ್ಚವನ್ನು ನೀಡಬೇಕಾದ ಪರಿಸ್ಥಿತಿ ಬಂದಿದೆ.

Comments are closed.