ಮುಂಬೈ

ಮಹಾರಾಷ್ಟ್ರದಲ್ಲಿ ಒಂದೇ ದಿನಕ್ಕೆ 7,862 ಜನರಲ್ಲಿ ಕೊರೋನಾ ಸೋಂಕು ಪತ್ತೆ, 226 ಸಾವು!

Pinterest LinkedIn Tumblr


ಮುಂಬೈ (ಜುಲೈ 10); ಕೊರೋನಾ ಮಹಾಮಾರಿ ಇಂದು ಮಹಾರಾಷ್ಟ್ರದಲ್ಲಿ ದಾಖಲೆ ನಿರ್ಮಿಸಿದೆ. ಇಂದು ಒಂದೇ ದಿನದಲ್ಲಿ ನೆರೆಯ ಮಹಾರಾಷ್ಟ್ರದಲ್ಲಿ 7,862 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,38,461ಕ್ಕೆ ಏರಿಕೆಯಾಗಿದ್ದರೆ, 226 ಜನ ಮೃತಪಟ್ಟಿದ್ದು ಸಾವಿನ ಸಂಖ್ಯೆಯೂ 9,893ಕ್ಕೆ ಏರಿಕೆಯಾಗಿದೆ. ಇದು ಮಹಾರಾಷ್ಟ್ರದಲ್ಲಿ ದಿನವೊಂದಕ್ಕೆ ಕೊರೋನಾ ನಿರ್ಮಿಸಿದ ದಾಖಲೆ ಜಿಗಿತ ಎನ್ನಲಾಗುತ್ತಿದೆ.

ದೇಶದಾದ್ಯಂತ ಕೊರೋನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆದರೆ, ಮಹಾರಾಷ್ಟ್ರದಲ್ಲಿ ಮಾತ್ರ ಬೇರೆಡೆಗಿಂತ ಶೇ.200ರಷ್ಟು ವೇಗವಾಗಿ ಕೊರೋನಾ ಹಬ್ಬುತ್ತಿರುವುದು, ಆ ಮೂಲಕ ನೆರೆ ರಾಜ್ಯಗಳಿಗೂ ಸೋಂಕು ವ್ಯಾಪಿಸುತ್ತಿರುವುದು ಎಲ್ಲರಿಗೂ ತಲೆನೋವಾಗಿ ಪರಿಣಮಿಸುತ್ತಿದೆ. ಸತತ ಮೂರು ತಿಂಗಳು ಲಾಕ್‌ಡೌನ್‌ ಮಾಡಿಯೂ ಮಹಾರಾಷ್ಟ್ರದಲ್ಲಿ ಮಾತ್ರ ಕೊರೋನಾ ಆರ್ಭಟ ಸದ್ಯಕ್ಕೆ ಹಿಡಿತಕ್ಕೆ ಸಿಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.

ಭಾರತದ ಒಟ್ಟು ಕೊರೋನಾ ಸೋಂಕಿತರ ಪೈಕಿ ಶೇ.40ರಷ್ಟು ಜನ ಮಹಾರಾಷ್ಟ್ರದಲ್ಲೇ ಇದ್ದಾರೆ. ಅದರಲ್ಲೂ ಪಶ್ಚಿಮ ಮಹಾರಾಷ್ಟ್ರ ಭಾಗವಾದ ಪುಣೆಯಲ್ಲಿ ಕೊರೋನಾ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದಷ್ಟು ಕೈಮೀರಿದೆ. ಇದೇ ಕಾರಣಕ್ಕೆ ಇಡೀ ಪುಣೆಯನ್ನು ಮತ್ತೊಂದು ಹಂತದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, “ಜುಲೈ 13 ರಿಂದ 23 ರವರೆಗೆ ಪುಣೆ ಮತ್ತು ನೆರೆಯ ಪಿಂಪ್ರಿ-ಚಿಂಚ್‌ವಾಡ್ ಜಿಲ್ಲೆಗಳನ್ನು ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಶುಕ್ರವಾರ ಪ್ರಕಟಣೆಯನ್ನೂ ಹೊರಡಿಸಿದೆ. ಆದಾಗ್ಯೂ, ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಲಭ್ಯತೆಗೆ ಯಾವುದೇ ತಡೆ ಇರುವುದಿಲ್ಲ” ಎಂದೂ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಕೊರೋನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಭಾರತದಲ್ಲಿ ಮಾರ್ಚ್‌.25 ರಿಂದ ಹಲವು ಹಂತಗಳಲ್ಲಿ ಸತತವಾಗಿ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಆದರೂ, ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವುದು ಸಾಧ್ಯವಾಗಲಿಲ್ಲ. ಹೀಗಾಗಿ ಕಳೆದ ಒಂದು ತಿಂಗಳ ಅವಧಿಯಿಂದ ಹಂತಹಂತವಾಗಿ ಲಾಕ್‌ಡೌನ್‌ ಅನ್ನು ಸಡಿಲಗೊಳಿಸಲಾಗುತ್ತಿದೆ. ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲಾಗುತ್ತಿದೆ.

ದೇಶದಾದ್ಯಂತ ಕಟ್ಟೆಚ್ಚರದೊಂದಿಗೆ ಹಲವು ವಾಣಿಜ್ಯ ವಹಿವಾಟಿಗೆ ಅವಕಾಶ ನೀಡಲಾಗುತ್ತಿದೆ. ಭಾನುವಾರ ಮಾತ್ರ ಸಂಪೂರ್ಣ ಲಾಕ್‌ಡೌನ್‌ ಆಚರಿಸಲಾಗುತ್ತಿದೆ. ಆದರೆ, ಈವರೆಗೆ ಶಾಲಾ-ಕಾಲೇಜುಗಳನ್ನು ತೆರೆಯಲು, ಅಂತಾರಾಜ್ಯ ಸಾರಿಗೆಗೆ ಅನುಮತಿಸಲಾಗಿಲ್ಲ. ಅಲ್ಲದೆ, ಮನರಂಜನಾ ವಲಯಕ್ಕೂ ಯಾವುದೇ ಅನುಮತಿ ನೀಡಲಾಗಿಲ್ಲ ಎಂಬುದು ಉಲ್ಲೇಖಾರ್ಹ.

Comments are closed.