ರಾಷ್ಟ್ರೀಯ

ಎನ್‍ಕೌಂಟರ್ ಆದ ಗ್ಯಾಂಗ್‍ಸ್ಟರ್ ವಿಕಾಶ್ ದುಬೆ ಕಾನ್ಪುರ ತಲುಪಲ್ಲ- ಪೊಲೀಸ್ ಸಂಭಾಷಣೆಯ ಸ್ಫೋಟಕ ವಿಡಿಯೋ ವೈರಲ್

Pinterest LinkedIn Tumblr

ಲಕ್ನೋ: ಇಂದು ಮುಂಜಾನೆ ಎನ್‍ಕೌಂಟರ್ ಆದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಸಾವಿನ ಸುತ್ತ ಅನುಮಾನಗಳ ಹುತ್ತ ಮೂಡಿವೆ. ಈ ನಡುವೆ ದುಬೆ ಕಾನ್ಪುರ ತಲುಪಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವ ವಿಡಿಯೋ ವೈರಲ್ ಆಗಿದೆ.

ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ಪೊಲೀಸ್ ಅಧಿಕಾರಿಗಳು ಮಾತನಾಡುತ್ತಿರುತ್ತಾರೆ. ಈ ವೇಳೆ ಓರ್ವ ಪೊಲೀಸ್ ಅಧಿಕಾರಿ ವಿಕಾಸ್ ದುಬೆ ಯಾವ ಸಮಯಕ್ಕೆ ಕಾನ್ಪುರಕ್ಕೆ ಬರುತ್ತಾನೆ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸಿದ ಪೊಲೀಸ್ ಅಧಿಕಾರಿಯೋರ್ವ, ವಿಕಾಸ್ ದುಬೆ ಕಾನ್ಪುರ ತಲುಪುವುದಿಲ್ಲ ಎಂದು ನಾನೂ ಭಾವಿಸುತ್ತೇನೆ ಎಂದು ನಗುತ್ತಾ ಹೇಳಿರುವುದು ಸ್ಪಷ್ಟವಾಗಿದೆ.

ಈ ವಿಡಿಯೋ ಜೊತೆಗೆ ಇನ್ನೊಂದು ಸ್ಫೋಟಕ ಸುದ್ದಿ ಹೊರಬಿದ್ದಿದ್ದು, ವಿಕಾಸ್ ದುಬೆಯನ್ನು ಎನ್‍ಕೌಂಟರ್ ಮಾಡಲೆಂದೇ ಪೊಲೀಸರು ಮಾರ್ಗ ಮಧ್ಯೆ ಆತನಿದ್ದ ಕಾರನ್ನು ಚೇಂಜ್ ಮಾಡಿದ್ದರು ಎನ್ನಲಾಗಿದೆ. ವರದಿಯ ಪ್ರಕಾರ, ವಿಕಾಸ್ ದುಬೆ ಮಧ್ಯ ಪ್ರದೇಶದಿಂದ ಸಫಾರಿ ಕಾರಿನಲ್ಲಿ ಹೊರಟಿದ್ದಾನೆ. ಆದರೆ ಪೊಲೀಸ್ ಎನ್‍ಕೌಂಟರ್ ಸಮಯದಲ್ಲಿ ಪಲ್ಟಿಯಾದ ಕಾರ ಎಸ್‍ಯೂವಿಯಾಗಿದೆ. ಈ ಬದಲಾವಣೆಯಿಂದ ಇದು ಫೇಕ್ ಎನ್‍ಕೌಂಟರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಇದರ ಜೊತೆಗೆ ವಿಕಾಸ್ ದುಬೆಯನ್ನು ಪ್ಲಾನ್ ಮಾಡಿಯೇ ಎನ್‍ಕೌಂಟರ್ ಮಾಡಲಾಗಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಈಗಾಗಲೇ #ಫೇಕ್‍ಎನ್‍ಕೌಂಟರ್ ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. ದೇಶದ ಎಲ್ಲ ಪ್ರಮುಖ ನಾಯಕರು ಟ್ವೀಟ್ ಮಾಡಿ ಉತ್ತರ ಪ್ರದೇಶದ ಸರ್ಕಾರ ಮತ್ತು ಪೊಲೀಸರ ಮೇಲೆ ಕಿಡಿಕಾರುತ್ತಿದ್ದಾರೆ. ಈ ನಡುವೆ ದೊಡ್ಡ ದೊಡ್ಡ ವ್ಯಕ್ತಿಗಳು ತಪ್ಪಿಸಿಕೊಳ್ಳಲು ವಿಚಾರಣೆಗಿಂತ ಮುಂಚೆಯೇ ವಿಕಾಸ್ ದುಬೆಯನ್ನು ಹತ್ಯೆ ಮಾಡಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಿಜೆಪಿ ಪಕ್ಷದ ಮೇಲೆ ವಿಪಕ್ಷಗಳು ಮುಗಿಬಿದ್ದಿವೆ. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಟ್ವೀಟ್ ಮಾಡಿ, ವಿಕಾಸ್ ದುಬೆಯ ಫೇಕ್‍ಎನ್‍ಕೌಂಟರ್ ಗೆ ನ್ಯಾಯ ಸಿಗಬೇಕು. ಆತ ಅಮಾಯಕನಾಗಿದ್ದು, ಸಮಾಜವಾದಿ ಪಕ್ಷದ ಉತ್ತಮ ಕಾರ್ಯಕರ್ತನಾಗಿದ್ದ. ರಾಜಕೀಯ ವೈಷಮ್ಯದಿಂದ ಬಿಜೆಪಿ ಸರ್ಕಾರ ಆತನನ್ನು ಕೊಲೆ ಮಾಡಿದೆ. ಇದರ ಹಿಂದೆ ಏನೋ ರಹಸ್ಯವಿದೆ ಎಂದು ದೂರಿದ್ದಾರೆ.

ವಿಕಾಸ್ ದುಬೆಯನ್ನು ಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಮಧ್ಯ ಪ್ರದೇಶದಿಂದ ಕಾನ್ಪುರಕ್ಕೆ ವಾಪಸ್ ಕರೆತರಲಾಗುತ್ತಿತ್ತು. ಆದರೆ ಇಂದು ಮುಂಜಾನೆ ಕಾನ್ಪುರದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದ್ದಂತೆ ವಿಕಾಸ್ ದುಬೆ ಕುಳಿತಿದ್ದ ವಾಹನವು ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಪಲ್ಟಿಯಾಗಿದೆ. ಈ ವೇಳೆ ಆರೋಪಿ ಗಾಯಗೊಂಡ ಪೊಲೀಸರೊಬ್ಬರಿಂದ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ.

Comments are closed.