ಮುಂಬೈ

ವಿಶ್ವದ ಟಾಪ್‌ 10 ಶ್ರೀಮಂತರಲ್ಲಿ ಮುಕೇಶ್‌ ಅಂಬಾನಿ: ಫೋರ್ಬ್ಸ್‌ ಪಟ್ಟಿ!

Pinterest LinkedIn Tumblr


ಮುಂಬಯಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ಈಗ ವಿಶ್ವದ ಟಾಪ್‌ 10 ಶ್ರೀಮಂತರಲ್ಲಿಒಬ್ಬರಾಗಿ ಹೊರಹೊಮ್ಮಿದ್ದಾರೆ.

ಫೋರ್ಬ್ಸ್‌ ರಿಯಲ್‌ ಟೈಮ್‌ ಬಿಲಿಯನೇರ್‌ ಪಟ್ಟಿಯ ಪ್ರಕಾರ ಮುಕೇಶ್‌ ಅಂಬಾನಿಯವರ ನಿವ್ವಳ ಸಂಪತ್ತು 64.6 ಶತಕೋಟಿ ಡಾಲರ್‌ಗೆ (ಅಂದಾಜು 4.84 ಲಕ್ಷ ಕೋಟಿ ರೂ.) ಏರಿಕೆಯಾಗಿದ್ದು, 9ನೇ ಸ್ಥಾನ ಗಳಿಸಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ಸಾಲಮುಕ್ತ ಕಂಪನಿಯಾಗಿದೆ ಎಂದು ಅಧ್ಯಕ್ಷ ಮುಕೇಶ್‌ ಅಂಬಾನಿಯವರು ಘೋಷಿಸಿದ ಬಳಿಕ, ಪ್ರತಿ ಷೇರಿನ ದರ ಶುಕ್ರವಾರ 1,738 ರೂ.ಗೆ ವೃದ್ಧಿಸಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ಗೆ 1.61 ಲಕ್ಷ ಕೋಟಿ ರೂ. ಸಾಲ ಬಾಕಿ ಇತ್ತು. ಆದರೆ ರಿಲಯನ್ಸ್‌ ಸಮೂಹವು ಇತ್ತೀಚೆಗೆ 1.75 ಲಕ್ಷ ಕೋಟಿ ರೂ. ಹೂಡಿಕೆಯನ್ನು ಗಳಿಸಿದ್ದು, ಸಾಲ ಮುಕ್ತವಾಗಿದೆ. ಮುಖ್ಯವಾಗಿ ರಿಲಯನ್ಸ್‌ ಜಿಯೊದ ಶೇ.24.71 ಷೇರುಗಳನ್ನು ಮಾರಾಟ ಮಾಡುವ ಮೂಲಕ ಕಂಪನಿ ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹಣ ಗಳಿಸಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ನ ಮಾರುಕಟ್ಟೆ ಮೌಲ್ಯವು ಶುಕ್ರವಾರ 11.52 ಲಕ್ಷ ಕೋಟಿ ರೂ.ಗೆ ವೃದ್ಧಿಸಿದ್ದು, ಈ ಮೈಲುಗಲ್ಲುದಾಟಿದ ಮೊದಲ ಭಾರತೀಯ ಕಂಪನಿಯಾಗಿದೆ. ಇದರೊಂದಿಗೆ ರಿಲಯನ್ಸ್‌ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯವಿರುವ ಕಂಪನಿಗಳಲ್ಲೊಂದಾಗಿದೆ.

ಫೋರ್ಬ್ಸ್‌ ನಿಯತಕಾಲಿಕೆಯು ವಿಶ್ವದ ಅತಿ ಶ್ರೀಮಂತರ ಸಂಪತ್ತಿನ ದಿನವಹಿ ಏರಿಳಿತಗಳನ್ನು ಅವಲೋಕಿಸುತ್ತದೆ. ಹಾಗೂ ರಿಯಲ್‌ ಟೈಮ್‌ ಬಿಲಿಯನೇರ್‌ ರಾರ‍ಯಂಕಿಂಗ್‌ ಅನ್ನು ಪ್ರಕಟಿಸುತ್ತದೆ.

ಅಮೆಜಾನ್‌ ಸ್ಥಾಪಕ ಜೆಫ್‌ ಬಿಜೋಸ್‌ ಅವರು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. (160 ಶತಕೋಟಿ ಡಾಲರ್‌), ಬಿಲ್‌ ಗೇಟ್ಸ್‌ 109 ಶತಕೋಟಿ ಡಾಲರ್‌ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮುಕೇಶ್‌ ಅಂಬಾನಿ 9ನೇ ಸ್ಥಾನದಲ್ಲಿದ್ದಾರೆ.

Comments are closed.