ಮುಂಬೈ

ಏರ್‌ಟೆಲ್‌ನಲ್ಲಿ 15,000 ಕೋಟಿ ರೂ. ಹೂಡಿಕೆಗೆ ಮುಂದಾದ ಟೆಕ್‌ ದೈತ್ಯ ಕಂಪನಿ ಅಮೆಜಾನ್‌

Pinterest LinkedIn Tumblr


ಮುಂಬಯಿ: ಮುಖೇಶ್‌ ಅಂಬಾನಿ ಒಡೆತನದ ಜಿಯೋದಲ್ಲಿ ಹಲವು ಕಂಪನಿಗಳು ಹೂಡಿಕೆ ಮಾಡಿದ ನಂತರ ಇದೀಗ ಅದರ ಪ್ರತಿಸ್ಪರ್ಧಿ ಏರ್ಟೆಲ್‌ನಲ್ಲಿ ಹೂಡಿಕೆ ಮಾಡಲು ಟೆಕ್‌ ದೈತ್ಯ ಕಂಪನಿ ಅಮೆಜಾನ್‌ ಮುಂದೆ ಬಂದಿದೆ. ಈ ಸಂಬಂಧ ಎರಡೂ ಕಂಪನಿಗಳ ನಡುವೆ ಮಾತುಕತೆ ಚಾಲ್ತಿಯಲ್ಲಿದೆ ಎಂಬುದಾಗಿ ‘ರಾಯ್ಟರ್ಸ್‌’ ವರದಿ ಮಾಡಿದೆ.

ಭಾರತದ ಡಿಜಿಟಲ್‌ ಆರ್ಥಿಕತೆ ಅಮೆರಿಕಾ ಕಂಪನಿಗಳ ಕಣ್ಸೆಳೆದಿದ್ದು, ಒಂದೊಂದಾಗಿ ಕಂಪನಿಗಳು ಭಾರತದಲ್ಲಿ ಬಂದು ಹಣ ಹೂಡುತ್ತಿವೆ. ಇದರ ಮುಂದುವರಿದ ಬೆಳವಣಿಗೆಯೇ ಈ ಅಮೆಜಾನ್‌ ಹೂಡಿಕೆ.

ಒಂದೊಮ್ಮೆ ಈ ಡೀಲ್‌ ಕುದುರಿದಲ್ಲಿ ಈಗಿನ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಏರ್ಟೆಲ್‌ ಮೂಲ ಸಂಸ್ಥೆ ಭಾರ್ತಿ ಏರ್ಟೆಲ್‌ನ ಅಮೆಜಾನ್‌ ಶೇ. 5 ರಷ್ಟು ಷೇರುಗಳನ್ನು ಖರೀದಿಸಲಿದೆ. ಸದ್ಯದ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಮತ್ತು ವೊಡಾಫೋನ್‌ ಐಡಿಯಾದ ನಂತರದ ಸ್ಥಾನದಲ್ಲಿ ಏರ್ಟೆಲ್‌ ಇದೆ.

ಜಿಯೋದಲ್ಲಿ ಜಾಗತಿಕ ಕಂಪನಿಗಳು ಸರಣಿಯಾಗಿ ಹೂಡಿಕೆ ಮಾಡಲು ಮುಂದೆ ಬರುತ್ತಿರುವ ಹೊತ್ತಲ್ಲೇ ಏರ್ಟೆಲ್‌ನಲ್ಲಿ ಅಮೆಜಾನ್‌‌ ಹೂಡಿಕೆಯ ಸುದ್ದಿ ಹೊರಬಿದ್ದಿರುವುದು ಗಮನಾರ್ಹ.

ಸದ್ಯ ಅಮೆಜಾನ್‌ ಮತ್ತು ಏರ್ಟೆಲ್‌ ನಡುವಿನ ಮಾತುಕತೆಗಳು ಪ್ರಾಥಮಿಕ ಹಂತದಲ್ಲಿದ್ದು, ಡೀಲ್‌ನ ಸ್ವರೂಪಗಳು ಬದಲಾಗಬಹುದು. ಅಥವಾ ಒಪ್ಪಂದ ಕುದುರದೆಯೂ ಹೋಗಬಹುದು ಎಂಬುದಾಗಿ ಇದರ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.

ಅಮೆಜಾನ್‌ ಭಾರತದ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದ್ದು, ಹತ್ತಿರ ಹತ್ತಿರ 50 ಸಾವಿರ ಕೋಟಿ ರೂಪಾಯಿ (6.5 ಬಿಲಿಯನ್‌ ಡಾಲರ್‌) ಹೂಡಿಕೆ ಮಾಡುವುದಾಗಿ ಈ ಹಿಂದೆ ಘೋಷಿಸಿತ್ತು. ತನ್ನ ಇ-ಕಾಮರ್ಸ್‌ ಜಾಲವನ್ನು ವಿಸ್ತರಿಸುವುದರ ಜೊತೆ ಜೊತೆಗೆ ಅಲೆಕ್ಸಾ ಸ್ಪೀಕರ್‌ ಮಾರಾಟ, ಕ್ಲೌಡ್‌ ಸ್ಟೋರೇಜ್‌, ವಿಡಿಯೋ ಸ್ಟ್ರೀಮಿಂಗ್‌ ಸೇವೆಗಳನ್ನು ವಿಸ್ತರಿಸುವುದರಲ್ಲೂ ಕಾರ್ಯನಿರತವಾಗಿದೆ.

Comments are closed.