ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ಇಬ್ಬರು ಪೊಲೀಸರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಭಾನುವಾರ ಬೆಳಗ್ಗೆ ಮುಖ್ಯ ಪೇದೆಯೊಬ್ಬರು ನವಿ ಮುಂಬೈ ಆಸ್ಪತ್ರೆಯಲ್ಲಿ ಕೊರೊನಾ ವೈರಸ್‌ಗೆ ಬಲಿಯಾದರು. ಕಳೆದ ಏಪ್ರಿಲ್ 23ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸ್ ಪೇದೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಜೀವಬಿಟ್ಟಿದ್ದಾರೆ. ಈ ಮೂಲಕ, ನಗರದಲ್ಲಿ ಪೊಲೀಸರು ಕೊರೊನಾ ವೈರಸ್‌ಗೆ ಬಲಿಯಾದ 2ನೇ ಪ್ರಕರಣ ದಾಖಲಾಗಿದೆ.
ಮುಂಬೈ ಪೊಲೀಸ್‌ನ ಹೆಡ್ ಕಾನ್ಸ್‌ಟೇಬಲ್ ನಿಧನದ ಸಂಬಂಧ ಇಲಾಖೆ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದೆ. ಕಳೆದ ಕೆಲವು ದಿನಗಳಿಂದ ಅವರು ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದರು. ಮುಖ್ಯಪೇದೆ ನಿಧನಕ್ಕೆ ಇಲಾಖೆ ಸಂತಾಪ ವ್ಯಕ್ತಪಡಿಸುತ್ತೆ, ಅಷ್ಟೇ ಅಲ್ಲ, ಅವರ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಇಲಾಖೆ ಪ್ರಾರ್ಥಿಸಿದೆ.
ನವಿ ಮುಂಬೈ ನಿವಾಸಿಯಾಗಿದ್ದ ಮುಖ್ಯಪೇದೆಗೆ ಕೊರೊನಾ ಪಾಸಿಟಿವ್ ಬಂದ ಕೂಡಲೇ ಅವರನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದ ಕಾರಣ, ಬೆಳಗಿನ ಜಾವ 4.40ಕ್ಕೆ ಇಹಲೋಕ ತ್ಯಜಿಸಿದರು ಎಂದು ತಿಳಿದುಬಂದಿದೆ.
ಲಾಕ್‌ಡೌನ್ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಹೊಣೆ ಹೊತ್ತಿದ್ದ ಮುಖ್ಯಪೇದೆ ದಿನವೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಪ್ರತಿದಿನವೂ ಬಸ್‌ನಲ್ಲಿ 30 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣಿಸುತ್ತಿದ್ದರು. ಅವರ ಮನೆ ನವಿ ಮುಂಬೈನಲ್ಲಿ ಇತ್ತು. ಶನಿವಾರವಷ್ಟೇ 57 ವರ್ಷದ ಕಾನ್ಸ್‌ಟೇಬಲ್ ಒಬ್ಬರು ಮುಂಬೈನಲ್ಲಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದರು. ಇದೀಗ 2ನೇ ಪ್ರಕರಣವಾಗಿ ಮುಖ್ಯಪೇದೆ ಬಲಿಯಾಗಿದ್ದಾರೆ.
ಶನಿವಾರ ನಿಧನರಾದ ಪೇದೆ ಸಂತಾಕ್ರೂಸ್ ಪೂರ್ವ ಪ್ರದೇಶದ ವಕೋಲಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಇಬ್ಬರೂ ಪೇದೆಗಳ ಮನೆಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮುಚ್ಚಲಾಗಿದೆ. ಈವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 96 ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ.ಈ ಪೈಕಿ 7 ಮಂದಿ ಗುಣಮುಖರಾಗಿದ್ದಾರೆ.
Comments are closed.