ರಾಷ್ಟ್ರೀಯ

40 ವೈದ್ಯರಿಗೇ ಕೊರೋನಾ ಸೋಂಕು: ಆಸ್ಪತ್ರೆಗೆ ಬೀಗ ಜಡಿದ ಆಡಳಿತ ಮಂಡಳಿ

Pinterest LinkedIn Tumblr


ನವದೆಹಲಿ(ಏ.26): ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ನ ಆರ್ಭಟವೂ ಈಗ ಭಾರತದಲ್ಲಿಯೂ ಮುಂದುವರಿದಿದೆ. ಈ ಮಾರಕ ವೈರಸ್​ನಿಂದ ಬಳಲುತ್ತಿರುವ ದೇಶದ ಜನರ ಪ್ರಾಣ ಉಳಿಸಲು ಹಗಲು-ರಾತ್ರಿಯೆನ್ನದೇ ವೈದ್ಯರು ಶ್ರಮಿಸುತ್ತಿದ್ದಾರೆ. ಹೀಗೆಯೇ ಕೋವಿಡ್​​-19 ಪೀಡಿತರಿಗೆ ದೆಹಲಿಯ ಜಹಾಂಗೀರ್ ಪುರ್ ಪ್ರದೇಶದಲ್ಲಿರುವ ಬಾಬು ಜಗಜೀವನ್ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ 40 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊವಿಡ್-19 ಸೋಂಕು ತಗಲಿರುವುದು ಧೃಡಪಟ್ಟಿದೆ. ಈ ರೀತಿಯ ಆತಂಕಕಾರಿ ಸುದ್ದಿಯೊಂದು ಬೆಳಕಿಗೆ ಬರುತ್ತಿದ್ದಂತೆಯೇ ವೈದ್ಯರು ಆತಂಕಕ್ಕೀಡಾಗಿದ್ದಾರೆ.

ಇನ್ನು, 40 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದೆ ಎಂಬ ಸುದ್ದಿ ಖಚಿತವಾದ ಕೂಡಲೇ ಆಸ್ಪತ್ರೆಯ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ. ಸದ್ಯ ಆಡಳಿತ ಮಂಡಳಿಯೂ ಆಸ್ಪತ್ರೆಗೆ ಬೀಗ ಜಡಿದು ಸ್ಯಾನಿಟೈಸ್ ಮಾಡಿದೆ. ಜತೆಗೆ 44 ಮಂದಿ ವೈದ್ಯಕೀಯ ಸಿಬ್ಬಂದಿಗೂ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

40 ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಇದುವರೆಗೂ ದೆಹಲಿಯಲ್ಲಿ 2,625 ಜನರಲ್ಲಿ ಸೋಂಕು ತಗುಲಿದೆ. ಈ ಪೈಕಿ 869 ಮಂದಿ ಗುಣಮುಖರಾಗಿದ್ದರೆ, 1,518 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಈ ಸೋಂಕಿನಿಂದ ರಾಷ್ಟ್ರ ರಾಜಧಾನಿಯಲ್ಲಿ 54 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಒಂದು ತಿಂಗಳ ಕಾಲ ದೇಶವನ್ನೇ ಲಾಕ್​ಡೌನ್​ ಮಾಡಿದ ಹೊರತಾಗಿಯೂ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

Comments are closed.