ಮುಂಬೈ

ಸಾಲಗಾರರ ಪತ್ತೆಗೆ ಬ್ಯಾಂಕ್‌ಗಳ ಕಸರತ್ತು

Pinterest LinkedIn Tumblr


ಮುಂಬಯಿ: ಕೊರೊನಾ ವೈರಸ್‌ ವಿಪತ್ತಿನ ಸಂದರ್ಭ ಅನೇಕ ಮಂದಿ ಸಾಲಗಾರರು ಬ್ಯಾಂಕ್‌ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳಿಗೆ ಸಕಾಲದಲ್ಲಿ ಸಾಲ ಮರು ಪಾವತಿಸುತ್ತಿಲ್ಲ. ಇಂಥ ಸಾಲಗಾರರ ಪೈಕಿ ಹಲವರ ವಿಳಾಸವನ್ನು ಪತ್ತೆ ಹಚ್ಚುವುದು, ಹಿಂಬಾಲಿಸುವುದು ಕೂಡ ಕಷ್ಟವಾಗಿದೆ.

ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಲ್ಲಿ ರಿಟೇಲ್‌ ಸಾಲಗಾರರ ಪೈಕಿ, ಈ ಸಮಸ್ಯೆ ಸೃಷ್ಟಿಯಾಗಿದೆ. ಸ್ಮಾರ್ಟ್‌ಫೋನ್‌, ರೆಫ್ರಿಜರೇಟರ್‌ ಇತ್ಯಾದಿ ವಸ್ತುಗಳನ್ನು ಸಾಲದಲ್ಲಿ ಪಡೆದವರು ಕಂತುಗಳನ್ನು ಸರಿಯಾಗಿ ಕಟ್ಟುತ್ತಿಲ್ಲ. ಅಂಥವರ ವಿಳಾಸವನ್ನು ಒತ್ತೆ ಹಚ್ಚುವುದು ಏಜೆಂಟರಿಗೆ ಸವಾಲಾಗಿದೆ. ಕನ್‌ಸ್ಯೂಮರ್‌ ಡ್ಯೂರೇಬಲ್‌ ವಸ್ತುಗಳಿಗೆ ಸಾಲಪಡೆದವರು ಲಾಕ್‌ಡೌನ್‌ ಅವಧಿಯಲ್ಲಿಸಾಲ ಮರುಪಾವತಿಯಲ್ಲಿ ವಿಫಲರಾಗುತ್ತಿದ್ದಾರೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

”ಸಾಲಗಾರರಲ್ಲಿ ಹಲವರಿಗೆ ಮರು ಪಾವತಿ ಮಾಡಲು ಮನಸ್ಸಿದೆ. ಆದರೆ ಅವರಿಗೆ ಸಾಧ್ಯವಾಗುತ್ತಿಲ್ಲ. ಮತ್ತೆ ಹಲವರು ಎಲ್ಲಿದ್ದಾರೆ ಎಂಬುದು ಪತ್ತೆಯಾಗುತ್ತಿಲ್ಲ” ಎಂದು ಹೆಸರು ಹೇಳಲು ಬಯಸದ ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬಜಾಜ್‌ ಫೈನಾನ್ಸ್‌, ಟಾಟಾ ಕ್ಯಾಪಿಟಲ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಶ್ರೀರಾಮ್‌ ಕ್ಯಾಪಿಟಲ್‌, ಎಕ್ಸಿಸ್‌ ಬ್ಯಾಂಕ್‌, ಎಲ್‌ಆ್ಯಂಡ್‌ಟಿ ಫೈನಾನ್ಸ್‌ ಈ ಕುರಿತ ‘ಎಕನಾಮಿಕ್‌ ಟೈಮ್ಸ್‌’ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಚಿನ್ನದ ಸಾಲ ನೀಡುವ ಮಣಪ್ಪುರಮ್‌ ಫೈನಾನ್ಸ್‌ ತನ್ನ 10 ಪರ್ಸೆಂಟ್‌ನಷ್ಟು ಗ್ರಾಹಕರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದಿದೆ.

“ಕೋವಿಡ್‌-19 ನಂತರ ಸಾಲ ವಸೂಲು ಗಣನೀಯ ಇಳಿಕೆಯಾಗಿದೆ. ಸಾಲ ಮರು ಪಾವತಿ ಗ್ರಾಹಕರಿಗೆ ಕಷ್ಟವಾಗುತ್ತಿದೆ” ಎಂದು ಮಣಪ್ಪುರಂ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಪಿ ನಂದಕುಮಾರ್‌ ಹೇಳಿದ್ದಾರೆ. ಈ ನಡುವೆ ಕೆಲ ಬ್ಯಾಂಕ್‌ಗಳು ಕ್ರೆಡಿಟ್‌ ಕಾರ್ಡ್‌ ಸಾಲದ ಮಿತಿಯನ್ನು ಕಡಿತಗೊಳಿಸಿವೆ.

2008ರಿಂದೀಚೆಗೆ ಕ್ರೆಡಿಟ್‌ ಕಾರ್ಡ್‌ ಸಾಲದ ಬ್ಯಾಲೆನ್ಸ್‌ ಮೊತ್ತ ಮೂರು ಪಟ್ಟು ಹೆಚ್ಚಳವಾಗಿದೆ. ಇದರ ಮರು ವಸೂಲು ಹಣಕಾಸು ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ಇಂಡಿಯಾ ರೇಟಿಂಗ್ಸ್‌ ರಿಸರ್ಚ್ ಪ್ರಕಾರ ಕಿರು ಹಣಕಾಸು ಸಂಸ್ಥೆಗಳು ಲಾಕ್‌ಡೌನ್‌ ಅವಧಿಯಲ್ಲಿ ಸಾಲ ಮರು ವಸೂಲಾತಿಯಲ್ಲಿ ಭಾರಿ ಹಿನ್ನಡೆ ಎದುರಿಸುತ್ತಿವೆ ಎನ್ನುತ್ತಾರೆ ತಜ್ಞರು.

Comments are closed.