ಮುಂಬೈ

ನಿಮ್ಮ ಖಾತೆಗೆ 58 ಲಕ್ಷ ಜಮಾ ಆಗಿದೆ, 1.05 ಕೋಟಿ ತೆರಿಗೆ ಪಾವತಿಸಿ: ಸ್ಲಂ ನಿವಾಸಿಗೆ ಐಟಿ ಶಾಕ್​

Pinterest LinkedIn Tumblr


ಮುಂಬೈ: ನೋಟು ಅಮಾನ್ಯೀಕರಣ ಸಮಯದಲ್ಲಿ ನಿಮ್ಮ ಬ್ಯಾಂಕ್​ ಖಾತೆಗೆ 58 ಲಕ್ಷ ರೂ. ಜಮಾ ಆಗಿದೆ. ಅದಕ್ಕೆ 1.05 ಕೋಟಿ ರೂ. ತೆರಿಗೆ ಪಾವತಿಸಿ ಎಂದು ಆದಾಯ ತೆರಿಗೆ ಇಲಾಖೆ ನೋಟಿಸ್​ ನೀಡಿರುವುದು ಮಹಾರಾಷ್ಟ್ರದ ಆ್ಯಂಬಿವಾಲಿ ಪಟ್ಟಣದ ಸ್ಲಂ ನಿವಾಸಿಯೊಬ್ಬರಿಗೆ ಶಾಕ್​ ನೀಡಿದೆ.

ಭೌಸಾಹೇಬ್​ ಅಹಿರೆ, ದಿನವೊಂದಕ್ಕೆ 300 ರೂ. ಸಂಪಾದಿಸುವ ದಿನಗೂಲಿ ನೌಕರ. ಐಟಿ ಅಧಿಕಾರಿಗಳಿಂದ ನೋಟಿಸ್​ ಪಡೆದ ಬೆನ್ನಲ್ಲೇ ಪೊಲೀಸ್​ ಠಾಣೆಗೆ ಹೋಗಿ ದೂರು ದಾಖಲಿಸಿದ್ದು, ಖಾತೆಯಲ್ಲಿ ಹಣ ಜಮಾವಣೆ ಆಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಬ್ಯಾಂಕ್ ಖಾತೆಯನ್ನು ನಕಲಿ ದಾಖಲೆಗಳ ಮೂಲಕ ತೆರೆದಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಅಹಿರೆ ತನ್ನ ಮಾವನ ಮನೆಯಲ್ಲಿ ನೆಲೆಸಿದ್ದಾರೆ. ಕಳೆದ ಸೆಪ್ಟೆಂಬರ್​ನಲ್ಲಿ ಮೊದಲ ನೋಟಿಸ್​ ಸ್ವೀಕರಿಸಿದ್ದಾಗಿ ಹೇಳಿದ್ದಾರೆ. 2016ರಲ್ಲಿ ನೋಟು ಅಮಾನ್ಯೀಕರಣ ಆದಂತಹ ಸಮಯದಲ್ಲಿ ಖಾಸಗಿ ಬ್ಯಾಂಕ್​ನಲ್ಲಿನ ಖಾತೆಗೆ ಹಣ ಜಮಾವಣೆ ಆಗಿದೆ ಎಂದು ನೋಟಿಸ್​ನಲ್ಲಿ ತಿಳಿಸಲಾಗಿತ್ತು. ಬಳಿಕ ಐಟಿ ಕಚೇರಿ ಹಾಗೂ ಬ್ಯಾಂಕ್​ ಬಳಿ ಹೋಗಿ ಪರಿಶೀಲಿಸಿದೆ. ಬ್ಯಾಂಕ್​ ಖಾತೆಗೆ ಪ್ಯಾನ್​ ನಂಬರ್​ ಲಿಂಕ್​ ಮಾಡಿರುವುದು ಗೊತ್ತಾಯಿತು. ಅಲ್ಲದೆ, ಬೇರೆ ಫೋಟೋ ಹಾಕಿ ಹಸ್ತಾಕ್ಷರವನ್ನು ಫೋರ್ಜರಿ ಮಾಡಿರುವುದು ತಿಳಿಯಿತು ಎಂದು ಅಹಿರೆ ತಿಳಿಸಿದ್ದಾರೆ. ಬಳಿಕ ದೂರು ನೀಡಿದ್ದಾಗಿ ಹೇಳಿದ್ದಾರೆ.

ಇದೇ ಜನವರಿ 7ರಂದು ಮತ್ತೊಂದು ತೆರಿಗೆ ನೋಟಿಸ್ ಸ್ವೀಕರಿಸಿರುವ ಅಹಿರೆಗೆ 1.05 ಕೋಟಿ ರೂ. ಪಾವತಿಸುವಂತೆ ನೋಟಿಸ್​ನಲ್ಲಿ ಕೇಳಲಾಗಿದೆ. ಇದು ಎರಡನೇ ನೋಟಿಸ್​ ಆಗಿದ್ದು, ಅಹಿರೆ ಪೊಲೀಸ್​ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಕೈಗೊಂಡಿದ್ದಾರೆ.

Comments are closed.