ಮುಂಬೈ

ಮರಾಠಿಗರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ: ರಾಜ್ಯಕ್ಕೆ ಎಚ್ಚರಿಕೆ ಕೊಟ್ಟ ಮಾಜಿ ಮುಖ್ಯಮಂತ್ರಿ

Pinterest LinkedIn Tumblr


ಮುಂಬೈ(ಡಿ. 30): ಬೆಳಗಾವಿ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿರುವ ಹೊತ್ತಲ್ಲೇ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉಗ್ರಾವತಾರ ತಾಳಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಕರ್ನಾಟಕದಲ್ಲಿ ಮರಾಠಿಗರಿಗೆ ಯಾವುದೇ ತೊಂದರೆ ಆದರೆ ನಮ್ಮ ಪಕ್ಷವೆಂಬ ಮುಖವನ್ನೂ ನೋಡದೇ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಫಡ್ನವಿಸ್ ಗುಡುಗಿದ್ದಾರೆ.

ಕರ್ನಾಟಕ ನವ ನಿರ್ಮಾಣ ಸೇನೆ ನಾಯಕ ಭೀಮಾಶಂಕರ್ ಪಾಟೀಲ್ ಅವರು ಎಂಇಎಸ್ ನಾಯಕರನ್ನು ಗುಂಡಿಟ್ಟು ಕೊಲ್ಲಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದರೆನ್ನಲಾದ ಹೇಳಿಕೆಯನ್ನಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಶಿವಸೇನೆಯ ಕಾರ್ಯಕರ್ತರು ದೊಡ್ಡ ರಂಪಾಟ ನಡೆಸುತ್ತಿದ್ದಾರೆ. ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಧ್ವನಿಗೂಡಿಸುತ್ತಿದ್ದಾರೆ. ಬೆಳಗಾವಿಯಲ್ಲಿರುವ ಮರಾಠ ಪ್ರಾಬಲ್ಯದ ಪ್ರದೇಶಗಳನ್ನು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದು ಕರೆದಿರುವ ಅವರು, ಇವುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ವಾದಕ್ಕೆ ಬೆಂಬಲ ನೀಡಿದ್ಧಾರೆ.

“ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಭಾಗದಲ್ಲಿರುವ ಮರಾಠಿ ಭಾಷಿಕರ ಜೊತೆ ಇಡೀ ಮಹಾರಾಷ್ಟ್ರವೇ ಇದೆ. ನಮ್ಮ ಪಕ್ಷ ಹಾಗೂ ಅದರ ಸಿದ್ಧಾಂತಗಳನ್ನು ಬದಿಗೊತ್ತಿ ನಾವು ನಮ್ಮ ಮರಾಠಿ ಸಹೋದರರಿಗೆ ಬೆಂಬಲ ನೀಡುತ್ತೇವೆ. ಕರ್ನಾಟಕದಲ್ಲಿರುವ ಬೆಳಗಾವಿ, ಕಾರವಾರ ಹಾಗೂ ಇತರ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ವಿಲೀನಗೊಳಿಸಬೇಕು. ಮಹಾರಾಷ್ಟ್ರದ ನಿಲುವಿಗೆ ನಾವು ಬದ್ಧವಾಗಿದ್ದೇವೆ. ನಮ್ಮ ಮರಾಠಿ ಸಹೋದರರಿಗೆ ಏನೇ ಅನ್ಯಾಯ ಮಾಡಿದರೂ ಮಹಾರಾಷ್ಟ್ರ ಸಹಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರಕ್ಕೆ ತಿಳಿಸಬಯಸುತ್ತೇವೆ” ಎಂದು ದೇವೇಂದ್ರ ಫಡ್ನವಿಸ್ ಎಚ್ಚರಿಕೆ ನೀಡಿದ್ಧಾರೆ.

ಉದ್ಧವ್ ಠಾಕ್ರೆ ಸಿಎಂ ಆದ ಬಳಿಕ ಕನ್ನಡಿಗರು ಮತ್ತು ಕರ್ನಾಟಕದ ಮೇಲೆ ಶಿವಸೇನೆಯ ಉಪದ್ರವ ಹೆಚ್ಚಾಗುತ್ತಿದೆ. ಶಿವಸೇನಾ ಕಾರ್ಯಕರ್ತರು ಭಾನುವಾರದಂದು ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿದ್ದಾರೆ. ಕೊಲ್ಹಾಪುರದಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ” ಕನ್ನಡ ಚಿತ್ರದ ಪ್ರದರ್ಶನಕ್ಕೂ ಅಡ್ಡಿ ಪಡಿಸಿದ್ಧಾರೆ. ಮೊನ್ನೆ ಶನಿವಾರವೂ ಕೊಲ್ಲಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ದಾಂಧಲೆ ಮತ್ತು ಪ್ರತಿಭಟನೆಗಳನ್ನು ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕೊಲ್ಹಾಪುರದಿಂದ ಕರ್ನಾಟಕಕ್ಕೆ ಇದ್ದ ಬಸ್ ಸೇವೆಗಳನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ.

ಬೆಳಗಾವಿ, ಕಾರವಾರ ಮತ್ತಿತರ ಜಿಲ್ಲೆಗಳಲ್ಲಿ ಮರಾಠಿ ಭಾಷಿಕರು ಹೆಚ್ಚಿರುವ ಸುಮಾರು 800 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದು ಆ ರಾಜ್ಯದ ಆಗ್ರಹವಾಗಿದೆ. ಕರ್ನಾಟಕದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಸಂಘಟನೆ ಅಸ್ತಿತ್ವದಲ್ಲಿದ್ದು ಹೋರಾಟ ನಡೆಸುತ್ತಲೇ ಬಂದಿದೆ. ಈ ಗಡಿ ವಿವಾದವು ಸುಪ್ರೀಂ ಕೋರ್ಟ್​ನಲ್ಲಿ ಇನ್ನೂ ಬಗೆಹರಿಯದೇ ಉಳಿದುಕೊಂಡಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಕರ್ನಾಟಕದ ಪರವಾಗಿ ನಿಲುವು ಹೊಂದಿದೆ ಎಂಬುದು ಶಿವಸೇನೆಯ ಆಪಾದನೆಯಾಗಿದೆ.

Comments are closed.