
ಮುಂಬಯಿ: ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಕಾಣೆಯಾಗಿದ್ದ ಎನ್‌ಸಿಪಿ ಎಂಎಲ್‌ಎಗಳಾದ ದೌಲತ್ ದರೊದ, ನರಹರಿ ಜಿರ್ವಾಲ್, ನಿತಿನ್ ಪವಾರ್ ಮತ್ತು ಅನಿಲ್ ಪಾಟೀಲ್ ಅವರನ್ನು ಗುರುಗ್ರಾಮದ ಪಂಚತಾರಾ ಹೋಟೆಲ್‌ನಿಂದ ರಕ್ಷಿಸಿದ ಹೈಡ್ರಾಮ ನಡೆದಿದೆ. ಈ ಮೂಲಕ ಎನ್‌ಸಿಪಿ ಸಂಖ್ಯಾಬಲ 51ಕ್ಕೆ ಏರಿಕೆಯಾದಂತಾಗಿದೆ.
ಎನ್‌ಸಿಪಿ ನ್ಯಾಷನಲ್ ಸ್ಟುಡೆಂಟ್ಸ್ ವಿಂಗ್‌ನ ಅಧ್ಯಕ್ಷೆ 28 ವರ್ಷದ ಸೋನಿಯಾ ದೂಹನ್ ನಾಪತ್ತೆಯಾಗಿದ್ದ ನಾಲ್ವರು ಎನ್‌ಸಿಪಿ ಶಾಸಕರ ರಕ್ಷಣೆಯ ಹೊಣೆ ಹೊತ್ತಿದ್ದರು. ನಾಪತ್ತೆಯಾಗಿದ್ದ ಶಾಸಕರ ಪೈಕಿ ಓರ್ವ ಎಂಎಲ್‌ಎ ಶರದ್ ಪವಾರ್ ಅವರಿಗೆ ಸಂದೇಶದ ಮೂಲಕ ತಮ್ಮ ಅಪಹರಣದ ಬಗ್ಗೆ ಮಾಹಿತಿ ರವಾನಿಸಿದ್ದರು. ನಮ್ಮ ಅನುಮತಿಗೆ ವಿರುದ್ಧವಾಗಿ ಪಂಚತಾರಾ ಹೋಟೆಲ್‌ನಲ್ಲಿ ಬಂಧಿಸಿರುವುದಾಗಿ ಸಂದೇಶ ಕಳುಹಿಸಿದ್ದರು ಎಂದು ಕುರುಕ್ಷೇತ್ರ ಯೂನಿವರ್ಸಿಟಿ ವಿದ್ಯಾರ್ಥಿಯಾಗಿರುವ ಸೋನಿಯಾ ದೂಹನ್ ಹೇಳಿದ್ದಾರೆ.
ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್‌ಗೆ ಸರಕಾರ ರಚಿಸಲು ಅವಕಾಶ ಕಲ್ಪಿಸಿದ ರಾಜ್ಯಪಾಲರ ನಡೆ ಪ್ರಶ್ನಿಸಿ ಶಿವಸೇನೆ,ಎನ್‌ಸಿಪಿ, ಕಾಂಗ್ರೆಸ್ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್ ಮಂಗಳವಾರ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ. ಬಿಜೆಪಿ ಮತ್ತು ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ನಡುವೆ ಶಾಸಕರ ಸಂಖ್ಯಾಬಲದ ಬಗ್ಗೆ ಉಂಟಾಗಿರುವ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಬಹುಮತ ಸಾಬೀತು ಪಡಿಸಲು ನ್ಯಾಯಾಲಯ ನಿರ್ದೇಶನ ನೀಡುವ ಸಾಧ್ಯತೆಯಿದೆ.
ಮಹಾರಾಷ್ಟ್ರ ಸರಕಾರ ರಚನೆ ಕುರಿತಾದ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ 10.30ಕ್ಕೆ ಹೊರ ಬೀಳಲಿದ್ದು, ಹಿಂದಿನ ದಿನ ಮುಂಬಯಿ ಹೋಟೆಲ್ ಒಂದರಲ್ಲಿ ಬಿಜೆಪಿ ಸರಕಾರದ ವಿರುದ್ಧದ ಶಾಸಕರು ಸೇರುವ ಮೂಲಕ ‘ನಾವು 162’ ಎಂಬ ಸಂದೇಶವನ್ನು ಸಾರಿದರು.
ಸುಮಾರು 70,000 ಕೋಟಿ ರೂ. ಮೌಲ್ಯದ ನೀರಾವರಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಅಜಿತ್ ಪವಾರ್ ಅವರು ಉಪ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 48 ಗಂಟೆಗಳಲ್ಲಿಯೇ ಹಗರಣಕ್ಕೆ ಸಂಬಂಧಿಸಿದ 9 ಪ್ರಕರಣಗಳನ್ನು ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳ ಮುಕ್ತಾಯಗೊಳಿಸಿದೆ.
Comments are closed.