ಮುಂಬೈ

ಬಹುಮತ ಸಾಬೀತುಪಡಿಸುವ ಮೊದಲ್ಲೇ ಫಡ್ನವೀಸ್ ಹಾಗೂ ಅಜಿತ್ ಪವಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ

Pinterest LinkedIn Tumblr

ಮುಂಬೈ: ಕಳೆದ ನಾಲ್ಕು ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆದ ಬೃಹತ್ ನಾಟಕ ಕೊನೆಗೂ ತೆರೆಬಿದ್ದಿದ್ದು, ಬಹುಮತ ಸಾಬೀತುಪಡಿಸುವ ಮೊದಲ್ಲೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಇದರಿಂದ ಮಹಾರಾಷ್ಟ್ರದಲ್ಲಿ ನಾಲ್ಕೇ ದಿನದಲ್ಲಿ ಬಿಜೆಪಿ ಸರ್ಕಾರ ಪತನವಾಗಿದ್ದು, ಎನ್‍ಸಿಪಿ-ಶಿವಸೇನೆ-ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಘಡಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಮುಖ್ಯಮಂತ್ರಿಯಾಗಿ ಉದ್ದವ್ ಠಾಕ್ರೆ ಅಧಿಕಾರ ಸ್ವೀಕರಿಸಲಿದ್ದಾರೆ.

ಮಂಗಳವಾರ ಬೆಳಗ್ಗೆ ಸುಪ್ರೀಂಕೋರ್ಟ್ ಬುಧವಾರ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‍ಗೆ ಆದೇಶ ನೀಡಿತ್ತು. ಯಾಲಯದ ತೀರ್ಪು ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಎನ್‍ಸಿಪಿಯಿಂದ ಸಿಡಿದೆದ್ದಿದ್ದ ಅಜಿತ್ ಪವಾರ್ ತಮ್ಮ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಇದಾದ ಮರುಗಳಿಗೆಯೇ ತುರ್ತು ಪತ್ರಿಕಾಗೋಷ್ಠಿ ಕರೆದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ , ನಮ್ಮ ಬಳಿ ಬಹುಮತ ಸಾಬೀತುಪಡಿಸಲು ಅಗತ್ಯ ಸಂಖ್ಯೆಯ ಸಂಖ್ಯಾಬಲ ಇಲ್ಲದ ಕಾರಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದರು.ಇದರಿಂದ ನಾಲ್ಕು ದಿನಗಳ ಕಾಲ ನಡೆದಿದ್ದ ಮಹಾ ನಾಟಕಕ್ಕೆ ತೆರೆಬಿದ್ದಿತು.

ಎನ್‍ಸಿಪಿಯ ಬಹುತೇಕ ಶಾಸಕರು ಪಕ್ಷದ ಮುಖ್ಯಸ್ಥ ಶರದ್ ಪವಾರ್‍ಗೆ ನಿಷ್ಠೆ ತೋರಿರುವುದು ಹಾಗೂ ನಂಬಿಕಸ್ಥ ಶಾಸಕರು ಕೊನೆ ಕ್ಷಣದಲ್ಲಿ ಕೈ ಕೊಟ್ಟಿರುವುದರಿಂದ ಅನಿವಾರ್ಯವಾಗಿ ಅಜಿತ್ ಪವಾರ್ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

ಎಷ್ಟೇ ಶತ ಪ್ರಯತ್ನ ನಡೆಸಿದರೂ ಎನ್‍ಸಿಪಿ-ಕಾಂಗ್ರೆಸ್-ಶಿವಸೇನೆಯ ಶಾಸಕರನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ. ಆಪರೇಷನ್ ಕಮಲ ನಡೆಯಬಹುದೆಂಬ ಭೀತಿ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ತಮ್ಮ ಶಾಸಕರು ಕದಲದಂತೆ ಅಷ್ಟ ದಿಕ್ಕುಗಳಲ್ಲೂ ರಕ್ಷಾ ಕೋಟೆಯನ್ನು ನಿರ್ಮಿಸಿದ್ದರು.

29 ಪಕ್ಷೇತರ ಶಾಸಕರಲ್ಲಿ ಬಿಜೆಪಿಗೆ 14 ಶಾಸಕರು ಬೆಂಬಲ ಸೂಚಿಸಿದ್ದರೂ ಬಹುಮತ ಸಾಬೀತು ಪಡಿಸಲು ಬಿಜೆಪಿಗೆ ಸಾಧ್ಯವಾಗುವುದಿಲ್ಲ. ಇನ್ನು ಎನ್‍ಸಿಪಿಯನ್ನು ನೆಚ್ಚಿಕೊಂಡು ಸರ್ಕಾರ ರಚನೆ ಮಾಡಿದ್ದ ಕಮಲ ಪಕ್ಷಕ್ಕೆ ಈ ಆಘಾತಕಾರಿ ಬೆಳವಣಿಗೆ ರಾಷ್ಟ್ರಮಟ್ಟದಲ್ಲಿ ಮುಜುಗರ ಸೃಷ್ಠಿಸಿದೆ.

ಸದನದಲ್ಲಿ ಮುಖಭಂಗ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಫಡ್ನವೀಸ್ ಅಧಿಕಾರದಿಂದ ನಿರ್ಗಮಿಸುವ ತೀರ್ಮಾನಕ್ಕೆ ಬಂದರು. ಶನಿವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಎನ್‍ಸಿಪಿ ಶಾಸಕರ ಬೆಂಬಲ ಪತ್ರ ನೀಡಿ ಬಿಜೆಪಿಯ ಜೊತೆ ಸರ್ಕಾರ ರಚನೆ ಮಾಡಿದ್ದರು. ಅದಕ್ಕೂ ಮುನ್ನ ಮುಂಜಾನೆಯೇ ರಾಷ್ಟ್ರಪತಿ ಅಡಳಿತವನ್ನು ತೆರವುಗೊಳಿಸಲಾಗಿತ್ತು. ತರುವಾಯ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸಿದ್ದರು.

ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ, ಎನ್‍ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರಕ್ಕೆ ಬಂದ ನಾಲ್ಕೇ ದಿನಗಳಲ್ಲಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಅನಿರೀಕ್ಷಿತ ಬೆಳವಣಿಗೆಯಿಂದ ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ಪಕ್ಷಗಳ ಮಹಾವಿಕಾಸ್ ಅಘಡಿ ಮೈತ್ರಿಕೂಟ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ. ಮೈತ್ರಿಕೂಟದ ಅಧ್ಯಕ್ಷ ಉದ್ದವ್‍ಠಾಕ್ರೆ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.

Comments are closed.