ಮುಂಬೈ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಮತ್ತು ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪದಗ್ರಹಣ ಮಾಡಿರುವ ಹಠಾತ್ ರಾಜಕೀಯ ಬೆಳವಣಿಗೆ ಬಗ್ಗೆ ಕೆಂಡಾಮಂಡಲ ವಾಗಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಇದು ಪ್ರಜಾಪ್ರಭುತ್ವದ ಮೇಲೆ ಬಿಜೆಪಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಎಂದು ಆರೋಪಿಸಿದ್ದಾರೆ.
ಮುಂಬೈನಲ್ಲಿಂದು ಶಿವಸೇನೆ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ ಬಿಜೆಪಿಯ ಕ್ರಮ ಸಂವಿಧಾನ ವಿರೋಧವಾದುದು ಎಂದು ಕಿಡಿಕಾರಿದರು. ನಾವು (ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟ ) ಈಗಲೂ ಒಗ್ಗಟ್ಟಾಗಿದ್ದೇವೆ.
ಆದರೆ ಬಿಜೆಪಿ ಅಧಿಕಾರ ಲಾಲಸೆಗಾಗಿ ವಾಮ ಮಾರ್ಗ ಅನುಸರಿಸುವ ಮೂಲಕ ಪ್ರಜಾಪ್ರಭುತ್ವದ ನೀತಿ ನಿಯಮಗಳು ಗಾಳಿಗೆ ತೂರಿದೆ ಎಂದು ವಾಗ್ದಾಳಿ ನಡೆಸಿದರು. ಪದೇ ಪದೇ ಬೆನ್ನಿಗೆ ಚೂರಿ ಹಾಕುವ ಬಿಜೆಪಿ ಮತ್ತೆ ತನ್ನ ಚಾಳಿಯನ್ನು ಮುಂದುವರೆಸಿದೆ. ಇದಕ್ಕೆ ಇಂದು ಬೆಳಗ್ಗೆ ನಡೆದಿರುವ ಘಟನೆಯೇ ಸಾಕ್ಷಿಯಾಗಿದೆ ಎಂದು ಶಿವಸೇನೆ ಮುಖ್ಯಸ್ಥರು ಆರೋಪಿಸಿದರು.
ಮಹಾರಾಷ್ಟ್ರ ಜನಕ್ಕೆ ದ್ರೋಹ ಬಗೆದಿರುವ ಬಿಜೆಪಿಯನ್ನು ಮತದಾರರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು. ಜಂಟಿ ಸುದ್ದಿಗೋಷ್ಠಿಯಲ್ಲಿ ಶಿವಸೇನೆ ಮತ್ತು ಎನ್‍ಸಿಪಿಯ ನಾಯಕರು ಮತ್ತು ಕೆಲವು ಶಾಸಕರು ಹಾಜರಿದ್ದರು. ಆದರೆ ಕಾಂಗ್ರೆಸ್‍ನ ಪ್ರಮುಖ ನಾಯಕರ ಗೈರು ಹಾಜರಿ ವೇದಿಕೆಯಲ್ಲಿ ಎದ್ದು ಕಾಣುತ್ತಿತ್ತು..
Comments are closed.