ಮಡಿಕೇರಿ : ಕೊಡಗಿನ ಪ್ರಮುಖ ಪ್ರವಾಸಿ ತಾಣ ದುಬಾರೆಯ ಸಾಕಾನೆ ಶಿಬಿರದಲ್ಲಿದ್ದ ಕುಶ ಎಂಬ ಆನೆ ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದು, ಇಂದು ಪತ್ತೆ ಆಗಿದೆ.
ದುಬಾರೆ ಆನೆ ಶಿಬಿರದಲ್ಲಿ ದಿನವೂ ಆನೆಗಳನ್ನು ಮೇಯಲು ಕಾಡಿಗೆ ಬಿಡಲಾಗುತ್ತದೆ ಮತ್ತು ಮಧ್ಯಾಹ್ನ ಮೂರು ಗಂಟೆ ವೇಳೆಗೆ ಇವು ವಾಪಸ್ಸಾಗುತ್ತವೆ. ಈ ರೀತಿ ಮೇಯಲು ಬಿಟ್ಟಿದ್ದ ಕುಶ ಎಂಬ 28 ವರ್ಷ ಪ್ರಾಯದ ಆನೆ ಸೋಮವಾರದಿಂದಲೂ ಶಿಬಿರಕ್ಕೆ ಹಿಂತಿರುಗಿರಲಿಲ್ಲ. ಅರಣ್ಯ ಆಧಿಕಾರಿಗಳು ಸತತ ನಾಲ್ಕು ದಿನಗಳಿಂದ ಇಡೀ ದುಬಾರೆ ಅರಣ್ಯದಲ್ಲೆಲ್ಲ ಹುಡುಕಾಟ ನಡೆಸಿದರೂ ಶುಕ್ರವಾರದವರೆಗೂ ಆನೆ ಪತ್ತೆ ಆಗಿರಲಿಲ್ಲ. ಇದು ಸಮೀಪದ ಗದ್ದೆ, ತೋಟಗಳಿಗೆ ನುಗ್ಗಿ ಹಾನಿ ಮಾಡಬಹುದೆನ್ನುವ ಭೀತಿ ಸ್ಥಳೀಯರದ್ದಾಗಿತ್ತು.
ಆದರೆ ಈ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು, ಕುಶ ಆನೆ ಪಿರಿಯಾಪಟ್ಟಣ ಸಮೀಪದ ಅರಣ್ಯದಲ್ಲಿರುವುದನ್ನು ಅರಣ್ಯ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಇಂದು ಸಂಜೆಯೊಳಗೆ ಶಿಬಿರಕ್ಕೆ ಸೇರಿಸಲಿದ್ದಾರೆ.
ಈ ಕುರಿತು ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರೂ ಅವರು, “ಕುಶ ಆನೆ ಮೇಯಲು ಬಿಟ್ಟಾಗ ಕಾಡಾನೆಯೊಂದರ ಜತೆ ಸೇರಿ ದೂರ ಹೋಗಿತ್ತು” ಎಂದು ಮಾಹಿತಿ ನೀಡಿದರು. 2016ರಲ್ಲಿ ವಿರಾಜಪೇಟೆಯ ಬೀಟೆಕಾಡು ಎಸ್ಟೇಟ್ ನಿಂದ ಎರಡು ಆನೆಗಳನ್ನು ಸೆರೆಹಿಡಿಯಲಾಗಿತ್ತು. ದುಬಾರೆ ಶಿಬಿರದಲ್ಲಿ ಪಳಗಿಸಿದ ಇವುಗಳಲ್ಲಿ ಒಂದಕ್ಕೆ ಲವ ಎಂದು, ಮತ್ತೊಂದಕ್ಕೆ ಕುಶ ಎಂದು ನಾಮಕರಣ ಮಾಡಲಾಗಿತ್ತು.

Comments are closed.