ಮುಂಬೈ/ನವದೆಹಲಿ:ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ಬಿಕ್ಕಟ್ಟು ಮತ್ತೆ ಮುಂದುವರಿದಿದ್ದು, ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನೆಯ ಮುಖಂಡರು ಶನಿವಾರ ಸಂಜೆ 4.30ಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಕಾರ್ಯಕ್ರಮ ಮುಂದೂಡಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಶುಕ್ರವಾರ ಎನ್ ಸಿಪಿ ವರಿಷ್ಠ ಶರದ್ ಪವಾರ್ ತಿಳಿಸಿದ್ದರು. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನಾ ಮುಖಂಡರು ರಾಜ್ಯಪಾಲರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿತ್ತು.
ರಾಜ್ಯಪಾಲರನ್ನು ಭೇಟಿಯಾಗುವ ಜಂಟಿ ನಿಯೋಗದ ಬಗ್ಗೆ ನನಗೆ ತಿಳಿದಿದೆ. ಆದರೆ ನಾವು ರೈತರ ವಿಚಾರವಾಗಿ ರಾಜ್ಯಪಾಲರ ಜತೆ ಸಭೆ ಮಾತುಕತೆ ನಡೆಸುವುದಷ್ಟೇ ಆಗಿದೆ, ಸರ್ಕಾರ ರಚನೆ ಕುರಿತು ಮಾತುಕತೆ ನಡೆಸುವುದು ನಮ್ಮ ಅಜೆಂಡಾದಲ್ಲಿ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಥ್ವಿರಾಜ್ ಚವಾಣ್ ತಿಳಿಸಿದ್ದಾರೆ.
ರಾಜ್ಯಪಾಲರು ನಮ್ಮ ಮನವಿಯಂತೆ ಮಾತುಕತೆ ನಡೆಸಲು ಆಹ್ವಾನ ನೀಡಿದ್ದಾರೆ. ಈ ಸಭೆಯಲ್ಲಿ ನಾವು ರೈತರ ವಿಚಾರವನ್ನಷ್ಟೇ ಚರ್ಚಿಸಲಿದ್ದೇವೆ. ಈ ಬಗ್ಗೆ ಹೆಚ್ಚಿನ ಊಹಾಪೋಹ ಬೇಕಾಗಿಲ್ಲ. ನಮ್ಮ ನಿಯೋಗದಲ್ಲಿ ಎನ್ ಸಿಪಿ, ಶಿವಸೇನಾ ಹಾಗೂ ಕಾಂಗ್ರೆಸ್ ಶಾಸಕರು ಇರುತ್ತಾರೆ ಎಂದು ಎನ್ ಸಿಪಿ ಮುಖಂಡ ನವಾಬ್ ಮಲಿಕ್ ಪ್ರತಿಕ್ರಿಯೆ ನೀಡುವ ಮೂಲಕ ಉಲ್ಟಾ ಹೊಡೆದಿದ್ದಾರೆ.
Comments are closed.