
ಮುಂಬೈ:ಮಹಾರಾಷ್ಟ್ರದಲ್ಲಿ ಶಿವಸೇನಾ-ಬಿಜೆಪಿ ನಡುವಿನ ಅಧಿಕಾರ ಹಂಚಿಕೆ ಬಿಕ್ಕಟ್ಟು ಮುಂದುವರಿದಿದ್ದು, ಮಹಾರಾಷ್ಟ್ರ ರಾಜ್ಯರಾಜಕಾರಣಕ್ಕೆ ತಾನು ಮತ್ತೆ ಮರಳುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಪಟ್ಟು ಸಡಿಲಿಸದ ಶಿವಸೇನಾ ಇದೀಗ ತನ್ನ ಶಾಸಕರನ್ನು ರೆಸಾರ್ಟ್ ನತ್ತ ಕರೆದೊಯ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ನಿತಿನ್ ಗಡ್ಕರಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂಬ ಊಹಾಪೋಹಕ್ಕೆ ಸ್ವತಃ ಗಡ್ಕರಿ ತೆರೆ ಎಳೆದಿದ್ದಾರೆ. ಶಿವಸೇನಾ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸುಭದ್ರ ಸರ್ಕಾರ ರಚಿಸಲಿದ್ದು, ಫಡ್ನವೀಸ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಗ್ಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಗಡ್ಕರಿ, ನಮಗೆ ಶಿವಸೇನಾದ ಬೆಂಬಲ ಸಿಗಲಿದ್ದು, ಅವರ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಮುಂಬೈಯಲ್ಲಿ ಶಿವಸೇನಾ ರೆಸಾರ್ಟ್ ರಾಜಕೀಯ:
ಶಿವಸೇನಾ ಶಾಸಕರು ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂಬುದು ಕೇವಲ ಊಹಾಪೋಹ. ಅವರಿಗೆ ತಮ್ಮ ಶಾಸಕರ ಬಗ್ಗೆಯೇ ಹೆಚ್ಚು ಭಯ ಇದೆ ಎಂದು ಸಂಜಯ್ ರಾವತ್ ಸುದ್ದಿಗಾರರಿಗೆ ತಿಳಿಸಿದ್ದು, ನಮ್ಮ ಶಾಸಕರ ಬಳಿ ಬರಲು ಯಾರೊಬ್ಬರು ಧೈರ್ಯ ತೋರಿಸಲ್ಲ ಎಂದು ತಿರುಗೇಟು ನೀಡಿದ್ದಾರೆ.
ಈ ಬೆಳವಣಿಗೆ ನಡುವೆಯೇ ಶಿವಸೇನಾ ಶಾಸಕರನ್ನು ಮುಂಬೈಯ ಬಾಂದ್ರಾ, ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಪಂಚತಾರಾ ಹೋಟೆಲ್ ನಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
ಉದ್ಧವ್ ಠಾಕ್ರೆ ಅವರ ನಿರ್ಧಾರದ ಹಿನ್ನೆಲೆಯಲ್ಲಿ ಶಿವಸೇನಾ ಶಾಸಕರು ರೆಸಾರ್ಟ್ ನತ್ತ ಮುಖಮಾಡಿದ್ದಾರೆ ಎಂದು ವರದಿ ವಿವರಿಸಿದೆ.
Comments are closed.