ರಾಷ್ಟ್ರೀಯ

ಅಯೋಧ್ಯೆ ಕುರಿತ ಶತಮಾನದ ಮಹಾ ತೀರ್ಪಿಗೆ ಕ್ಷಣಗಣನೆ!

Pinterest LinkedIn Tumblr


ಅಯೋಧ್ಯೆ (ಉತ್ತರ ಪ್ರದೇಶ): ಶತಮಾನದ ಶ್ರೀರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ಒಡೆತನ ವಿವಾದ ಕುರಿತು ಸುಪ್ರೀಂ ಕೋರ್ಟ್‌ನಿಂದ ತೀರ್ಪು ಹೊರಬೀಳಲು ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಅಯೋಧ್ಯೆಯಲ್ಲಿ ನೀರವ ಮೌನ ಆವರಿಸಿದೆ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನಗರದ ಬೀದಿಗಳು ಬಣಗುಡುತ್ತಿವೆ.

ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಉದ್ದೇಶದೊಂದಿಗೆ ಈಗಾಗಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲಾಡಳಿತ ಡಿಸೆಂಬರ್‌ವರೆಗೂ ಹಲವು ನಿರ್ಬಂಧಗಳನ್ನು ವಿಧಿಸಿದೆ. ನಗರದಾದ್ಯಂತ ಹೆಚ್ಚುವರಿ ಸಂಖ್ಯೆಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಭಾರಿ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ನವೆಂಬರ್‌ 11ರಂದು ಕಾರ್ತಿಕ ಪೂರ್ಣಿಮೆ ದಿನ ಪುಣ್ಯ ಸ್ನಾನ ಕೈಗೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಜನರಲ್ಲಿ ಒಂದು ಬಗೆಯ ಆತಂಕ ಮನೆ ಮಾಡಿದ್ದು ಅಯೋಧ್ಯೆಯ ಬೀದಿಗಳು ಖರೀದಿ ವಹಿವಾಟಿಲ್ಲದೇ ಬಿಕೋ ಎನ್ನುತ್ತಿವೆ.

‘ಅಯೋಧ್ಯೆ ತೀರ್ಪಿನ ಕುರಿತು ಜನರ ಕುತೂಹಲ ಹೆಚ್ಚಿದೆ. ತೀರ್ಪು ಹೇಗೆಯೇ ಬಂದರೂ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಅಗತ್ಯತೆಯನ್ನು ಈಗಾಗಲೇ ಹಿಂದೂ ಹಾಗೂ ಮುಸ್ಲಿಂ ಸಮಯದಾಯದ ಮುಖಂಡರು ಪ್ರತಿಪಾದಿಸಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ ಎಂಬ ವಿಶ್ವಾಸ ಜನರಲ್ಲಿದೆ. ಆದಾಗ್ಯೂ ಕೆಲವರು 1992ರಲ್ಲಿ ನಡೆದ ಗಲಾಟೆಯನ್ನು ನೆನಪಿಸಿಕೊಂಡು ತಮ್ಮ ಕುಟುಂಬ ಸದಸ್ಯರನ್ನು ಹಾಗೂ ಬಂಧು ಬಳಗದವರನ್ನು ಪರ ಊರಿಗೆ ಕಳುಹಿಸಿದ್ದು, ನಗರದಲ್ಲಿ ಜನದಟ್ಟಣೆ ಕಡಿಮೆಯಾಗಿದೆ. ವ್ಯಾಪಾರಿಗಳಿಂದಲೂ ಹೇಳಿಕೊಳ್ಳುವಂತಹ ಉತ್ಸಾಹ ಕಾಣುತ್ತಿಲ್ಲ. ಹೀಗಾಗಿ ಖರೀದಿ ಭರಾಟೆ ಕ್ಷೀಣಿಸಿದೆ. ಎಲ್ಲೆಲ್ಲೂಒಂದು ಬಗೆಯ ನೀರವ ಮೌನ ಆವರಿಸಿದೆ.

ಮುಂಬಯಿಯಲ್ಲೂ ಬಿಗಿ ಭದ್ರತೆ: ಅಯೋಧ್ಯೆ ಕುರಿತು ತೀರ್ಪು ಕೆಲವೇ ದಿನಗಳಲ್ಲಿ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಂಬಯಿಯಲ್ಲಿ ಕೂಡ ಭದ್ರತೆ ಬಿಗಿಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಲಾಗಿದೆ.

Comments are closed.