ರಾಷ್ಟ್ರೀಯ

ಅಯೋಧ್ಯಾ ತೀರ್ಪು; ಉತ್ತರಪ್ರದೇಶದಲ್ಲಿ 8 ತಾತ್ಕಾಲಿಕ ಜೈಲು…

Pinterest LinkedIn Tumblr


ಲಕ್ನೋ/ನವದೆಹಲಿ:ಬಹು ನಿರೀಕ್ಷಿತ ಹಾಗೂ ಅತೀ ಸೂಕ್ಷ್ಮ ಪ್ರಕರಣವಾಗಿರುವ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಭೂ ವಿವಾದದ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉತ್ತರಪ್ರದೇಶ ಸರ್ಕಾರ ಅಂಬೇಡ್ಕರ್ ನಗರದಲ್ಲಿರುವ ವಿವಿಧ ಕಾಲೇಜುಗಳಲ್ಲಿ ಎಂಟು ತಾತ್ಕಾಲಿಕ ಜೈಲುಗಳನ್ನು ಸ್ಥಾಪಿಸಿರುವುದಾಗಿ ವರದಿ ತಿಳಿಸಿದೆ.

ಅಕ್ಬರ್ ಪುರ್, ಟಾನ್ ಡಾ, ಜಲಾಲ್ ಪುರ್, ಜೈಟ್ ಪುರ್, ಭಿಟಿ ಮತ್ತು ಅಲ್ಲಾಪುರ್ ಗಳಲ್ಲಿ ತಾತ್ಕಾಲಿಕ ಜೈಲುಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಅಂಬೇಡ್ಕರ್ ಜಿಲ್ಲಾ ಶಾಲಾ ಇನ್ಸ್ ಪೆಕ್ಟರ್ ಬಿಡುಗಡೆ ಮಾಡಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಈ ಕಾಲೇಜುಗಳಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸುವ ಜೈಲುಗಳಿಗೆ ಸಂಬಂಧಿತ ಠಾಣಾಧಿಕಾರಿಗೆ ಅಗತ್ಯವಾದ ಮೂಲಭೂತ ವ್ಯವಸ್ಥೆಯನ್ನು ಒದಗಿಸಿ ಕೊಡಲು ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

ಅಯೋಧ್ಯಾನಗರಿಯಲ್ಲಿ ಸರ್ಪಗಾವಲು:

ಅಯೋಧ್ಯಾ ಪ್ರಕರಣದ ತೀರ್ಪು ನವಂಬರ್ 17ರೊಳಗೆ ಯಾವ ದಿನದಲ್ಲಿಯೂ ಪ್ರಕಟವಾಗಬಹುದು. ಈ ನಿಟ್ಟಿನಲ್ಲಿ ಯಾವುದೇ ಹಿಂಸಾಚಾರ, ಕಾನೂನು ಸುವ್ಯವಸ್ಥೆ ಹದಗೆಡದಂತೆ ಮುಂಜಾಗ್ರತಾ ಕ್ರಮದ ನಿಟ್ಟಿನಲ್ಲಿ ಅಯೋಧ್ಯಾ ಸೇರಿದಂತೆ ಉತ್ತರಪ್ರದೇಶದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಅಯೋಧ್ಯಾದಲ್ಲಿ ಈಗಾಗಲೇ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ. ಕೇಂದ್ರ ಸರ್ಕಾರ ನಾಲ್ಕು ಸಾವಿರಕ್ಕೂ ಹೆಚ್ಚುವರಿ ಅರೆಸೇನಾಪಡೆಯನ್ನು ರವಾನಿಸಿದೆ. ಸಿಆರ್ ಪಿಎಫ್, ಕಮಾಂಡೋ ಪಡೆಗಳನ್ನೂ ಕೂಡಾ ನಿಯೋಜಿಸಲಾಗಿದೆ.

ತೀರ್ಪು ಪ್ರಕಟವಾಗು ನಿಟ್ಟಿನಲ್ಲಿ ಅಯೋಧ್ಯಾ ನಗರಿಯಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದ್ದಿರುವುದಾಗಿಯೂ ಗುಪ್ತಚರ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕೆಂದು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಕೇಂದ್ರ ಗೃಹಸಚಿವಾಲಯ ಸಂದೇಶ ರವಾನಿಸಿದೆ.

ಊಹಾಪೋಹದ ಹಾಗೂ ಸುಳ್ಳು ಸುದ್ದಿ ಹಬ್ಬಿಸುವುದನ್ನು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ವರದಿ ತಿಳಿಸಿದೆ.

ಮುಂಬೈಯಲ್ಲೂ ಬಿಗಿ ಭದ್ರತೆ:

ಅಯೋಧ್ಯಾ ತೀರ್ಪು ಪ್ರಕಟವಾಗಲು ದಿನಗಣನೆ ಆರಂಭವಾಗುತ್ತಿರುವ ನಡುವೆ ಮುಂಬೈಯ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಸಿದ್ಧತೆ ನಡೆದಿದೆ. ಅಲ್ಲದೇ ಕೆಲವು ಪ್ರದೇಶಗಳಲ್ಲಿ ಯಾವುದೇ ಮೆರವಣಿಗೆ, ಸಂಭ್ರಮಾಚರಣೆ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ.

ಮುಂಬೈ ಪೊಲೀಸ್ ಕಮೀಷನರ್ ಸಂಜಯ್ ಬಾರ್ವೆ ಸೋಮವಾರ ಪ್ರಮುಖ ಮುಸ್ಲಿಂ ಮುಖಂಡರು, ಪತ್ರಕರ್ತರು, ಧಾರ್ಮಿಕ ಮುಖಂಡರ ಜತೆ ಸಮಾಲೋಚನೆ ನಡೆಸಿದ್ದರು.

Comments are closed.