
ನವದೆಹಲಿ: ವೀರ್ ಸಾವರ್ಕರ್ ಅವರನ್ನು ನಂಬದ ಜನರನ್ನು ಸಾರ್ವಜನಿಕವಾಗಿ ಥಳಿಸಬೇಕು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ವೀರ್ ಸಾವರ್ಕರ್ ಪಾತ್ರ ಮತ್ತು ಹೋರಾಟವನ್ನು ಯಾರು ಅರ್ಥ ಮಾಡಿಕೊಂಡಿಲ್ಲ. ವೀರ್ ಸಾವರ್ಕರ್ ಭಾರತ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ. ಇವರನ್ನು ನಂಬದ ಜನರನ್ನು ಸಾರ್ವಜನಿಕವಾಗಿ ಥಳಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಈ ಹಿಂದೆ ವೀರ್ ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಠಾಕ್ರೆ ಹೇಳಿದರು.
ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ಅಂಗಸಂಸ್ಥೆಯಾದ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್ಎಸ್ಯುಐ) ವೀರ್ ಸಾವರ್ಕರ್ ಪ್ರತಿಮೆ ಬಗ್ಗೆ ಮಾತನಾಡಿದ್ದ ಕೆಲವೇ ದಿನಗಳ ನಂತರ ಶಿವಸೇನಾ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಆರ್ಎಸ್ಎಸ್ ಅಂಗಸಂಸ್ಥೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದ ವಿವಿಯ ವಿದ್ಯಾರ್ಥಿ ಸಂಘ ವೀರ್ ಸಾವರ್ಕರ್ ಪ್ರತಿಮೆಯನ್ನು ಕ್ಯಾಂಪಸ್ನ ಒಳಭಾಗದಲ್ಲಿ ಪ್ರತಿಷ್ಠಾಪಿಸಿದ್ದರು.
ಎನ್ಎಸ್ಯುಐ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಪ್ರತಿಮೆ ನಿರ್ಮಾಣಕ್ಕೆ ಟೀಕೆ ಮಾಡಿದ್ದವು. ವೀರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಅವರಿಗೆ ಸರಿಸಮವಲ್ಲ ಎಂದು ಹೇಳಿದ್ದವು.
ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ, ವೀರ್ ಸಾವರ್ಕರ್ ಅವರನ್ನು ನಂಬದ ಜನರನ್ನು ಸಾರ್ವಜನಿಕವಾಗಿ ಹೊಡೆಯಬೇಕು. ಏಕೆಂದರೆ ಅವರಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ವೀರ್ ಸಾವರ್ಕರ್ ಹೋರಾಟದ ಬಗ್ಗೆ ಗೊತ್ತಿಲ್ಲ. ರಾಹುಲ್ ಗಾಂಧಿ ಕೂಡ ಈ ಹಿಂದೆ ಸಾವರ್ಕರ್ ಅವರನ್ನು ಅವಮಾನಿಸಿದ್ದರು ಎಂದರು.
ಒಂದು ದಿನದ ಹಿಂದೆಯಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಸ್ವಾತಂತ್ರ್ಯ ಹೋರಾಟಕ್ಕೆ ವೀರ್ ಸಾವರ್ಕರ್ ತಮ್ಮ ಕುಟುಂಬವನ್ನು ತ್ಯಾಗ ಮಾಡಿದರು. ಅವರ ಹೋರಾಟಕ್ಕೆ ಸರಿಸಮಾನಾದದ್ದು ಯಾವುದೂ ಇಲ್ಲ. ಮತ್ತು ಅವರ ಗೌರವವನ್ನು ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದ್ದರು.
Comments are closed.