ಮುಂಬೈ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೊರಳಿಗೆ ಬಾಂಬ್ ಕಟ್ಟಿ ದೇಶದಿಂದ ಹೊರಗಡೆ ಎಸೆಯಬೇಕು ಎಂದು ಬಿಜೆಪಿ ನಾಯಕಿ, ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪಂಕಜಾ ಮುಂಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಜಲ್ನಾ ಲೋಕಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಶ್ರಮಿಸುತ್ತಿದ್ದಾರೆ. ಆದರೆ ಕೆಲ ವಿರೋಧಿಗಳು ಇದನ್ನು ಪ್ರಶ್ನಿಸುತ್ತಾರೆ ಹಾಗೂ ಸಾಕ್ಷಿ ಕೇಳುತ್ತಾರೆ ಎಂದು ಬಾಲಕೋಟ್ ಏರ್ ಸ್ಟ್ರೈಕ್ ದಾಳಿಗೆ ಸಾಕ್ಷಿ ಕೇಳುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಯೋಧರ ಮೇಲೆ ದಾಳಿ ನಡೆದಾಗ ಪ್ರಧಾನಿ ಮೋದಿ ಅವರು ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಮಟ್ಟಹಾಕಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದಕ್ಕೆ ಸಾಕ್ಷಿ ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ನಾನು ಹೇಳುವುದೇನೆಂದರೆ ರಾಹುಲ್ ಗಾಂಧಿ ಅವರ ಕೊರಳಿಗೆ ಬಾಂಬ್ ಕಟ್ಟಿ ಬೇರೆ ದೇಶಕ್ಕೆ ಎಸೆಯಬೇಕು. ಆಗ ಅವರಿಗೆ ಏರ್ ಸ್ಟ್ರೈಕ್ ಏನು ಎನ್ನುವುದು ತಿಳಿಯುತ್ತದೆ ಎಂದು ಹೇಳಿದರು.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ದಾನ್ವೆ ರಾವ್ ಸಾಹೇಬ್ ದಾದಾರಾವ್ ಅವರು ಕೂಡ ಸಮಾವೇಶದಲ್ಲಿ ಇದ್ದರು. ಅವರ ಎದುರೇ ಪಂಕಜಾ ಮುಂಡೆ ಈ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಅವರು, ಬಿಜೆಪಿಯು ಕೀಳು ರಾಜಕೀಯ ಮಾಡುತ್ತಿದೆ. ಪಂಕಜಾ ಮುಂಡೆ ಹೇಳಿಕೆಯು ಇದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಅವರಿಂದ ಬೇರೆ ಏನನ್ನೂ ನಿರೀಕ್ಷಿಸಲಾರೆವು. ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಹೇಮಂತ್ ಕರ್ಕರೆ ಅವರನ್ನು ದೇಶದ್ರೋಹಿ ಎಂದು ಬಿಜೆಪಿಯವರು ಹೇಳಿದ್ದಾರೆ. ಅಂತಹ ನಾಯಕರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಮುಂಡೆ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.