ಕರ್ನಾಟಕ

10ರ ಜೊತೆ ಇನ್ನೂ ಹೆಚ್ಚು ಜಯಿಸಲು ಬಿಜೆಪಿ ಕಸರತ್ತು!

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಎರಡನೇ ಸುತ್ತಿನ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಪೈಕಿ 10ರಲ್ಲಿ ಬಿಜೆಪಿ ಸಂಸದರಿದ್ದಾರೆ. ಆ ಪೈಕಿ ಇಬ್ಬರು ಕೇಂದ್ರ ಸಚಿವರು ಕಣದಲ್ಲಿದ್ದಾರೆ. ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಲು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾದ ಅನಿವಾರ್ಯತೆಯಲ್ಲಿರುವ ಬಿಜೆಪಿ, ಹಾಲಿ ಸ್ಥಾನಗಳನ್ನು ಉಳಿಸಿಕೊಳ್ಳುವುದರ ಜತೆಗೆ ಹೆಚ್ಚುವರಿ ಕ್ಷೇತ್ರಗಳನ್ನು ಗೆಲ್ಲಲು ಕಸರತ್ತು ನಡೆಸಿದೆ.

ಮೊದಲ ಸುತ್ತಿನ ಮತದಾನ ನಡೆದ ಹಳೇ ಮೈಸೂರು ಪ್ರದೇಶಗಳನ್ನು ಒಳಗೊಂಡ 14 ಕ್ಷೇತ್ರಗಳಿಗೆ ಹೋಲಿಸಿದರೆ ಎರಡನೇ ಸುತ್ತಿನ ಮತದಾನ ನಡೆಯುತ್ತಿರುವ 14 ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಹೊಂದಿದ್ದು, ಇಲ್ಲೇ ಮತ್ತಷ್ಟು ಸ್ಥಾನ ಗಳಿಸಬೇಕು ಎಂಬುದು ನಾಯಕರ ಲೆಕ್ಕಾಚಾರವಾಗಿದೆ.

ಕೇಂದ್ರ ಸಚಿವರಾದ ರಮೇಶ್‌ ಜಿಗಜಿಣಗಿ, ಅನಂತ ಕುಮಾರ್‌ ಹೆಗಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಪ್ರಹ್ಲಾದ್‌ ಜೋಶಿ ಸೇರಿದಂತೆ ಪ್ರಮುಖ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿರುವುದರಿಂದ ಬಿಜೆಪಿಗೆ ಹೆಚ್ಚು ಸ್ಥಾನ ಗೆಲ್ಲುವುದು ಪ್ರತಿಷ್ಠೆಯಾಗಿದೆ.

ಹದಿನಾಲ್ಕು ಕ್ಷೇತ್ರಗಳ ಪೈಕಿ ಕೊಪ್ಪಳ, ಬಾಗಲಕೋಟೆ, ಚಿಕ್ಕೋಡಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಪ್ರಚಾರ ಸಭೆ ನಡೆಸಿದ್ದರು. ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಹ ಕೆಲವೆಡೆ ರೋಡ್‌ ಶೋ ನಡೆಸಿದ್ದರು. ಚುನಾವಣಾ ಘೋಷಣೆಗೂ ಮುನ್ನವೇ ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಬಂದು, ಪ್ರಚಾರ ಸಭೆ ನಡೆಸಿ, ಕಾಂಗ್ರೆಸ್‌-ಜೆಡಿಎಸ್‌ಗಿಂತ ಮುಂಚೆಯೇ ಚುನಾವಣಾ ಬಿಸಿ ಏರುವಂತೆ ಮಾಡಿದ್ದರು.

ಕಲಬುರಗಿ – ಬಳ್ಳಾರಿಯತ್ತ ವಿಶೇಷ ಚಿತ್ತ: ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿನಿಧಿಸುವ ಕಲಬುರಗಿ ಹಾಗೂ ಉಪ ಚುನಾವಣೆಯಲ್ಲಿ ಕೈ ತಪ್ಪಿದ ಬಳ್ಳಾರಿ ಕ್ಷೇತ್ರದ ಬಗ್ಗೆ ಬಿಜೆಪಿ ಹೆಚ್ಚು ಗಮನ ನೀಡಿದ್ದು, ಕಲಬುರಗಿಯಲ್ಲಿ ಕಾಂಗ್ರೆಸ್‌ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಡಾ.ಉಮೇಶ್‌ ಜಾಧವ್‌ ಅವರಿಗೆ ಅವಕಾಶ ಕೊಟ್ಟು, ಖರ್ಗೆ ವಿರುದ್ಧ ಕಣಕ್ಕಿಳಿಸಲಾಗಿದೆ.

ಬಳ್ಳಾರಿಯಲ್ಲಿ ದೇವೇಂದ್ರಪ್ಪ ಎಂಬ ಹೊಸ ಮುಖಕ್ಕೆ ಅವಕಾಶ ನೀಡಿ ಉಗ್ರಪ್ಪ ವಿರುದ್ಧ ಕಣಕ್ಕಿಳಿಸಲಾಗಿದೆ. ದೇವೇಂದ್ರಪ್ಪ ಅವರು ಜಾರಕಿಹೊಳಿ ಕುಟುಂಬದ ಸಂಬಂಧಿಕರು ಎಂಬುದು ವಿಶೇಷ. ಚಿಕ್ಕೋಡಿ ಕ್ಷೇತ್ರವನ್ನೂ ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿಯಿಂದ ಶಾಸಕಿ ಶಶಿಕಲಾ ಜೊಲ್ಲೆ ಪತಿ ಅಣ್ಣಾ ಸಾಹೇಬ ಜೊಲ್ಲೆ ಅವರನ್ನು ಕಣಕ್ಕಿಳಿಸಿದೆ.

ಜತೆಗೆ, ರಾಯಚೂರು ಕ್ಷೇತ್ರವನ್ನೂ ತನ್ನ ವಶ ಮಾಡಿಕೊಳ್ಳಲು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಈ ಎಲ್ಲಾ ಕಡೆ ರಾಜ್ಯ ನಾಯಕರು ಪ್ರಚಾರ ಸಭೆಗಳನ್ನು ನಡೆಸಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಹೀಗಾಗಿ, ಹಾಲಿಯಿರುವ 10 ಸ್ಥಾನ ಉಳಿಸಿಕೊಂಡು ಇನ್ನೂ 2- 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನೊಂದಿಗೆ ಬಿಜೆಪಿ ತನ್ನ ಎಲ್ಲ ಶ್ರಮ ಪ್ರಯೋಗಿಸಿದೆ.

Comments are closed.