ಮುಂಬೈ

ತೀರಿ ಹೋಗಿದ್ದಾನೆಂದು ಭಾವಿಸಲಾಗಿದ್ದ ವ್ಯಕ್ತಿಯೋರ್ವ 25 ವರ್ಷದ ಬಳಿಕ ಮನೆಗೆ!

Pinterest LinkedIn Tumblr


ಮುಂಬಯಿ: ತೀರಿ ಹೋಗಿದ್ದಾನೆಂದು ಭಾವಿಸಲಾಗಿದ್ದ ವ್ಯಕ್ತಿಯೋರ್ವ ಬರೋಬ್ಬರಿ 25 ವರ್ಷದ ಬಳಿಕ ಕುಟುಂಬಸ್ಥರನ್ನು ಸೇರಿಕೊಂಡಿದ್ದಾರೆ. ಇದರಿಂದ ಆ ಮನೆಯಲ್ಲೀಗ ಸಂತಸದ ವಾತಾವರಣ ಮೂಡಿದೆ.

ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಾರಾಷ್ಟ್ರದ ಬೊಂಗಿರ್ವಾರ್ ನಿವಾಸಿ ರಾಜಾರಾಂ ಪಚೂರಿಯಾ ಎಂಬವರು 25 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವರು, ವಾಪಸ್ಸಾಗಿರಲಿಲ್ಲ. ಹೀಗಾಗಿ ಅವರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು.

ಯಾವುದೇ ಸುಳಿವು ಇಲ್ಲದೆ ಓರ್ವ ವ್ಯಕ್ತಿ ಸುಮಾರು 7 ವರ್ಷಗಳ ಕಾಲ ನಾಪತ್ತೆಯಾದರೆ, ಆತ ಸಾವನ್ನಪ್ಪಿದ್ದಾನೆ ಎಂದು ನ್ಯಾಯಾಲಯ ಪರಿಗಣಿಸುತ್ತದೆ ಎನ್ನುವುದು ಇಲ್ಲಿ ಗಮನಾರ್ಹ.

ಆದರೆ, 25 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ರಾಜಾರಾಂ, ಅಕ್ಟೋಬರ್ 26ರಂದು ಪಶ್ಚಿಮ ಬಂಗಾಳದ ಸಾಗರ್ ಪ್ರದೇಶದಲ್ಲಿರುವ ಕಪಿಲ್ಮುನಿ ದೇವಾಲಯದಲ್ಲಿ ಹೀನಾಯ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳೀಯ ಜನರು ಅವರನ್ನು ರಕ್ಷಿಸಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಸಂವಹನದ ಕೊರತೆಯಿಂದ ರಾಜಾರಾಂ ಯಾರು?, ಎಲ್ಲಿಯವರು? ಇವರ ಕುಟುಬಸ್ಥರು ಎಲ್ಲಿದ್ದಾರೆ?, ಎನ್ನುವ ವೈಯಕ್ತಿಕ ಮಾಹಿತಿ ಪತ್ತೆಗೆ ಹರಸಾಹಸ ಪಟ್ಟಿದ್ದರು.

ಕೊನೆಗೆ ಆಸ್ಪತ್ರೆಯ ಆಡಳಿತ ಮಂಡಳಿಯವರು ಪಶ್ಚಿಮ ಬಂಗಾಳದ ರೇಡಿಯೋ ಕ್ಲಬ್‌ನ ಕಾರ್ಯದರ್ಶಿ ಅಂಬರೀಶ್ ನಾಗ್ ಬಿಸ್ವಾಸ್ ಅವರನ್ನು ಸಂಪರ್ಕಿಸಿದ್ದಾರೆ. ಬಳಿಕ ಅವರು ಮಹಾರಾಷ್ಟ್ರದ ಹ್ಯಾಮ್ ರೇಡಿಯೋ ಸಂಘದ ಅಧಿಕಾರಿಗಳನ್ನು ಸಂಪರ್ಕಿಸಿ, ರಾಜಾರಾಂ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಗ್ರಾಮದ ಪ್ರೌಢಶಾಲೆಯೊಂದರ ಬಗ್ಗೆ ರಾಜಾರಾಮ ನೀಡಿದ್ದ ಮಾಹಿತಿಯನ್ನಾಧರಿಸಿ ತಲಾಷ್‌ ನಡೆಸಿದರು.

ರಾಜಾರಾಂ ಫೋಟೋವನ್ನು ಇಟ್ಟುಕೊಂಡು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಪುತ್ರ ಹಾಗೂ ಪತ್ನಿ ಇವರನ್ನು ಗುರುತು ಹಚ್ಚಿದರು. ನಂತರ ಅವರಿಂದ ಇನ್ನಷ್ಟು ಮಾಹಿತಿ ಪಡೆದುಕೊಂಡ ನಂತರ ರಾಜಾರಾಂ ಈಗ ಪತ್ನಿ, ಪುತ್ರನನ್ನು ಕೂಡಿಕೊಂಡಿದ್ದಾರೆ.

Comments are closed.