ಕರ್ನಾಟಕ

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಟ ಉಪೇಂದ್ರ!

Pinterest LinkedIn Tumblr


ತುಮಕೂರು: ನಟ ಉಪೇಂದ್ರ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಿದ್ದು, ಶಿವೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಗೆ ಹೋಗಿ ದರ್ಶನ ಪಡೆದಿದ್ದಾರೆ.

ನಟ ಉಪೇಂದ್ರ ಅವರು ಮೊದಲಿಗೆ ಗದ್ದುಗೆಗೆ ಹೋಗಿ ಅಲ್ಲಿ ಶ್ರೀಗಳಿಗೆ ಪೂಜೆ ಸಲ್ಲಿಸಿ ನಮಸ್ಕರಿಸಿದ್ದಾರೆ. ಬಳಿಕ ಕೆಲ ಕಾಲ ಸಿದ್ದಲಿಂಗಸ್ವಾಮಿಗಳ ಜೊತೆ ಕುಳಿತು ಉಭಯಕುಶಲೋಪರಿ ನಡೆಸಿದ್ದಾರೆ. ತದನಂತರ ಮಾಧ್ಯಮಗಳ ಜೊತೆ ಮಾತನಾಡಿದ ಉಪೇಂದ್ರ ಅವರು, ಇಂದು ಹುಬ್ಬಳ್ಳಿಯಲ್ಲಿ ಒಂದು ಪ್ರೆಸ್ ಮೀಟ್ ಇದೆ, ಅದಕ್ಕೆ ಹೊರಟ್ಟಿದ್ದೆ. ಈ ಕಡೆಯಿಂದ ಹೋಗಬೇಕಾದರೆ ಇಲ್ಲಿಗೆ ಬಂದು ಭೇಟಿ ಕೊಟ್ಟು ಹೋಗುವುದು ಒಂದು ಸಂಪ್ರದಾಯವಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ದೇವರಿದ್ದಾಗ ಮಠಕ್ಕೆ ಬಂದಿದ್ದೆ, ಈಗ ಅವರ ಆತ್ಮವಿದ್ದಾಗ ಬಂದಿದ್ದೇನೆ. ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಾಗಲೆಲ್ಲಾ ಸಂತೋಷವಾಗುತ್ತದೆ. ಯಾಕೆಂದರೆ ಆನಂದ, ಅನುಭೂತಿ ದೊರೆಯುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಪ್ರಜಾಕೀಯದ ಕಾನ್ಫರೆನ್ಸ್ ಗಾಗಿ ಹೋಗುತ್ತಿದ್ದೇನೆ. ಎಂಪಿ ಚುನಾವಣೆಗೆ 28 ಕ್ಷೇತ್ರದಿಂದ ನಿಲ್ಲಿಸಬೇಕು ಅಂದುಕೊಂಡಿದ್ದೇನೆ. ಹಾಗಾಗಿ ಹುಬ್ಬಳ್ಳಿ, ದಾವಣಗೆರೆಯಲ್ಲಿ ಪ್ರೆಸ್ ಮೀಟ್ ಇದೆ ಹೋಗುತ್ತಿದ್ದೇನೆ. ನಿಮಗೆ ಸರಿ ಅನ್ನಿಸಿದರೆ ಬೆಂಬಲ ಕೊಡಿ. ಸ್ವಾಮೀಜಿ ಬಳಿ ಕೂಡ ಮಾತನಾಡಿದೆ, ಅವರು ಇಂದು ತುಂಬಾ ಜನರಿದ್ದಾರೆ ಇನ್ನೊಂದು ದಿನ ಬನ್ನಿ ಮಾತನಾಡೋಣ ಅಂತ ಹೇಳಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಅಭಿಮಾನಿಗಳು ನಟ ಉಪೇಂದ್ರ ಅವರ ಜೊತೆ ಸೆಲ್ಫಿಗಾಗಿ ಮುಗಿಬಿದ್ದರು.

Comments are closed.