ಮುಂಬೈ

ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಉದ್ಯಮಿಯನ್ನ ತಳ್ಳಿ ಹತ್ಯೆ ಮಾಡಿದ ದಂಪತಿ

Pinterest LinkedIn Tumblr


ಮುಂಬೈ: ೫೬ ವರ್ಷದ ಉದ್ಯಮಿಯೊಬ್ಬರನ್ನ ರೈಲ್ವೆ ಪ್ಲಾಟ್‌ಫಾರ್ಮ್‌ನಿಂದ ಚಲಿಸುತ್ತಿದ್ದ ರೈಲಿನೆಡೆಗೆ ತಳ್ಳಿ ಹಾಡಹಗಲೇ ಹತ್ಯೆ ಮಾಡಿರುವ ಘಟನೆ ಇಲ್ಲಿನ ಮುಳುಂದ್ ರೈಲ್ವೆ ಠಾಣೆಯಲ್ಲಿ ನಡೆದಿದೆ. ಉದ್ಯಮಿ ಜೊತೆ ದಂಪತಿ ಜಗಳವಾಡಿದ ಬಳಿಕ ಆತನನ್ನ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಶನಿವಾರ ಈ ಘಟನೆ ನಡೆದಿದ್ದು, ಈ ಸಂಬಂಧ ಕುರ್ಲಾ ಜಿಆರ್‌ಪಿ ಕೊಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಆರೋಪಿ ದಂಪತಿಯನ್ನ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ರೈಲ್ವೆ ಠಾಣೆಯ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನ ಪಡೆದುಕೊಂಡಿದ್ದಾರೆ. ಹತ್ಯೆಯಾದವನನ್ನ ದೀಪಕ್ ಪಟ್ವಾ ಎಂದು ಗುರುತಿಸಲಾಗಿದ್ದು, ಈತ ಮುಳುಂದ್‌ನಲ್ಲಿ ಪತ್ನಿ ಹಾಗೂ ಮಗನೊಂದಿಗೆ ವಾಸವಾಗಿದ್ದ. ಅಲ್ಲದೆ, ಕಬ್ಬಿಣದ ವ್ಯಾಪಾರವನ್ನು ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಘಟನೆ ಬಳಿಕ ದೀಪಕ್‌ನನ್ನು ಆಸ್ಪತ್ರೆಗೆ ಸೇರಿಸಲಾಯಿತಾದ್ರೂ, ಈ ವೇಳೆಗೆ ಆತ ಮೃತಪಟ್ಟಿದ್ದ. ನಂತರ, ಕುರ್ಲಾ ಜಿಆರ್‌ಪಿ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನ ಪರಿಶೀಲನೆ ಮಾಡಿದ್ದು, ಈ ವೇಳೆ ಪುರುಷ ಹಾಗೂ ಮಹಿಳೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ದೀಪಕ್‌ ಜೊತೆಗೆ ಜಗಳ ತೆಗೆದು ಆತನನ್ನ ಪಕ್ಕದ ಪ್ಲಾಟ್‌ಫಾರ್ಮ್‌ನಲ್ಲಿ ವೇಗವಾಗಿ ಬರುತ್ತಿದ್ದ ರೈಲಿನ ಕಡೆಗೆ ತಳ್ಳಿ ಹತ್ಯೆ ಮಾಡಲಾಗಿದೆ.

ಅಲ್ಲದೆ, ಅಪರಿಚಿತರು ಈ ಕೃತ್ಯ ಮಾಡಿದ್ದಾರೆ ಎಂದೂ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನ ಪರಿಶೀಲಿಸಿದ ಬಳಿಕ ದೀಪಕ್ ಪಟ್ವಾ ಸಂಬಂಧಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅಲ್ಲದೆ, ಹತ್ಯೆಗೂ ಮುನ್ನ ರೈಲ್ವೆ ಮೇಲ್ಸೇತುವೆಯಿಂದ ಕೆಲ ಮಹಿಳಾ ಪ್ರಯಾಣಿಕರು ದೀಪಕ್ ಬಳಿ ಓಡಿ ಬರುತ್ತಿದ್ದುದ್ದನ್ನೂ ಪೊಲೀಸರು ಗಮನಿಸಿದ್ದಾರೆ. ಇವರೂ ಸಹ ಈ ಕೇಸ್‌ನ ಹಿಂದಿರುವ ಅನುಮಾನ ಉಂಟಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಅಂತ ಕುರ್ಲಾ ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.