ಮುಂಬೈ

ನಾಲ್ಕರ ಕಂದಮ್ಮನ ಮೇಲೆ ವೃದ್ಧೆಯಿಂದ ಲೈಂಗಿಕ ದೌರ್ಜನ್ಯ

Pinterest LinkedIn Tumblr


ಮುಂಬೈ: 4 ವರ್ಷದ ಪುಟ್ಟ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ದಕ್ಷಿಣ-ಮಧ್ಯ ಮುಂಬೈನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 59 ವರ್ಷದ ಮಹಿಳಾ ಸಹಾಯಕಿಯನ್ನು ಬಂಧಿಸಲಾಗಿದೆ ಎಂದು ಬೈಕುಲಾ ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮಂಗಳವಾರ ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ಆರೋಪಿ ಮಹಿಳೆ ಮಗುವಿನ ಜತೆ ಅನುಚಿತವಾಗಿ ನಡೆದುಕೊಂಡಿದ್ದಾಳೆ. ಈ ಕುರಿತು ಮಗು ತನ್ನ ಸಂಬಂಧಿಕರ ಬಳಿ ಹೇಳಿಕೊಂಡಿತ್ತು. ಬಳಿಕ ಇದು ಪೋಷಕರ ಗಮನಕ್ಕೆ ಬಂದಿದ್ದು ಹೌಹಾರಿದ ಅವರು ಸೋಮವಾರ ಮುಂಜಾನೆ ಶಾಲೆಗೆ ಬಂದು ಪ್ರಾಂಶುಪಾಲರ ಬಳಿ ದೂರು ಸಲ್ಲಿಸಿದ್ದಾರೆ. ಮಗು ಕಳೆದ ಒಂದು ವಾರದಿಂದ ಹೊಟ್ಟೆ ನೋವೆಂದು ಹೇಳುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ವಲಯ ಡಿಸಿಪಿ ವೀರೇಂದ್ರ ಮಿಶ್ರಾ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಗುವಿನ ತಂದೆ, ಕಳೆದೊಂದು ವಾರದಿಂದ ಮಗಳು ಶಾಲೆಗೆ ಹೋಗುವುದಿಲ್ಲವೆಂದು ಹಠ ಮಾಡುತ್ತಿದ್ದಳು. ಜತೆಗೆ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಕಾರಣ ಕೇಳಿದರೆ ಏನನ್ನೂ ಹೇಳುತ್ತಿರಲಿಲ್ಲವಾದ್ದರಿಂದ ಆಕೆಯ ಮೇಲೆ ಕಳೆದ ಹಲವು ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ದೌರ್ಜನ್ಯದ ಬಗ್ಗೆ ನಮಗೆ ಅರಿವಾಗಿಲ್ಲ. ಶಾಲೆಯಲ್ಲೊಬ್ಬರು ತನ್ನನ್ನು ಅಸಭ್ಯವಾಗಿ ಸ್ಪರ್ಶಿಸುತ್ತಿದ್ದಾರೆ ಎಂದಾಕೆ ಭಾನುವಾರ ರಾತ್ರಿ ಸೋದರ ಸಂಬಂಧಿಯೊಬ್ಬರ ಬಳಿ ಹೇಳಿಕೊಂಡಿದ್ದಾಳೆ. ತಕ್ಷಣಕ್ಕೆ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಆರೋಪಿ ಮಹಿಳೆ ಕಳೆದ 25 ವರ್ಷಗಳಿಂದ ಶಾಲೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು ಮುಂದಿನ ವರ್ಷ ನಿವೃತ್ತಿಯಾಗುವುದಿತ್ತು. ಇಲ್ಲಿಯವರೆಗೆ ಆಕೆಯ ವಿರುದ್ಧ ಇಲ್ಲಿಯವರೆಗೆ ಯಾವುದೇ ದೂರುಗಳು ಕೇಳಿ ಬಂದಿರಲಿಲ್ಲ. ತನಿಖೆ ನಡೆಯುತ್ತಿದ್ದು ಆಕೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

Comments are closed.