ಮುಂಬೈ

ವಿಚ್ಛೇದಿತ ದಂಪತಿಯ ಅವಿವಾಹಿತ ಪುತ್ರಿಗೂ ಜೀವನಾಂಶ

Pinterest LinkedIn Tumblr


ಮುಂಬಯಿ: ಒಂದೊಮ್ಮೆ ದಂಪತಿ ವಿಚ್ಛೇದನ ಪಡೆದುಕೊಂಡು ದೂರಾದರೆ ಅವರ ಅವಿವಾಹಿತ ಪುತ್ರಿ ತಂದೆಯಿಂದ ಜೀವನಾಂಶ ಕೋರಬಹುದು ಎಂಬ ಮಹತ್ವದ ತೀರ್ಪನ್ನು ಬಾಂಬೆ ಹೈಕೋರ್ಟ್‌ ನೀಡಿದೆ.

ಹೆತ್ತವರು ವಿಚ್ಛೇದನ ಹೊಂದಿ ದೂರಾದರೆ 18 ವರ್ಷದ ಮೀರಿದ ಅವಿವಾಹಿತ ಹೆಣ್ಮಕ್ಕಳೂ ತಂದೆಯಿಂದ ಜೀವನಾಂಶ ಬಯಸಬಹುದು, ಸ್ವತಃ ತಾಯಿಯೇ ತನ್ನ ಪ್ರಾಪ್ತ ಮಗಳ ಪರವಾಗಿ ಜೀವನಾಂಶಕ್ಕೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಶುಕ್ರವಾರ ತೀರ್ಪು ನೀಡಿದ್ದಾರೆ.

ಗಂಡನಿಂದ ಪರಿತ್ಯಕ್ತರಾದ ಮುಂಬಯಿ ಮಹಿಳೆಯೊಬ್ಬರು 19 ವರ್ಷದ ತನ್ನ ಮಗಳಿಗೆ ಗಂಡನಿಂದ ಜೀವನಾಂಶ ಬಯಸಿ ಅರ್ಜಿ ಸಲ್ಲಿಸಿದ್ದರು. ಅದನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್‌ ಮೊರೆ ಹೊಕ್ಕಿದ್ದರು. ದಂಪತಿಗೆ 1988ರಲ್ಲಿ ಮದುವೆಯಾಗಿದ್ದು, 1997ರಲ್ಲಿ ದೂರಾಗಿದ್ದರು. ಇಬ್ಬರು ಪುತ್ರರು, ಒಬ್ಬ ಪುತ್ರಿ ತಾಯಿ ಜತೆಗಿದ್ದರು. ಈ ಮಕ್ಕಳ ತಂದೆ, ಮೂರೂ ಮಕ್ಕಳಿಗೆ ಜೀವನಾಂಶ ನೀಡುತ್ತಿದ್ದರು. ಆದರೆ, ಮಗಳಿಗೆ 18 ವರ್ಷ ದಾಟುತ್ತಿದ್ದಂತೆಯೇ ಜೀವನಾಂಶ ನಿಲ್ಲಿಸಿಬಿಟ್ಟರು.

ಇದನ್ನು ಪ್ರಶ್ನಿಸಿ ಮಹಿಳೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಮಗಳು ಪ್ರಾಪ್ತ ವಯಸ್ಸಿಗೆ ಬಂದಿದ್ದರೂ ಉನ್ನತ ವ್ಯಾಸಂಗ ಮಾಡುವುದಕ್ಕಾಗಿ ಹಣಕ್ಕೆ ತನ್ನನ್ನೇ ಅವಲಂಬಿಸಿದ್ದಾಳೆ. ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬನಿಗೆ ಶಿಕ್ಷಣ ಸಾಲ ಮರುಪಾವತಿ ಮಾಡುವ ಜವಾಬ್ದಾರಿ ಇದೆ, ಇನ್ನೊಬ್ಬನಿಗೆ ಇನ್ನೂ ಕೆಲಸ ಸಿಕ್ಕಿಲ್ಲ ಎಂದು ವಿವರಿಸಿದ್ದರು. ಮಹಿಳೆ ಪ್ರಸಕ್ತ 25000 ರೂ. ಜೀವನಾಂಶ ಪಡೆಯುತ್ತಿದ್ದು, ಮಗಳಿಗೆ ಹೆಚ್ಚುವರಿಯಾಗಿ 15000 ರೂ. ನೀಡಬೇಕು ಎಂದು ಬಯಸಿದ್ದರು.

ಆದರೆ, ಕೌಟುಂಬಿಕ ನ್ಯಾಯಾಲಯ ಆಕೆಯ ಮನವಿಯನ್ನು ತಿರಸ್ಕರಿಸಿತು. ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ)ಯಡಿ ಅಪ್ರಾಪ್ತ ಮಕ್ಕಳಿಗೆ ಮಾತ್ರ ಜೀವನಾಂಶ ಕೊಡಲು ಅವಕಾಶವಿದೆ ಎಂದು ಅದು ಹೇಳಿತ್ತು. ಇದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್‌ ಮೊರೆ ಹೊಕ್ಕರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾಂಗ್ರೆ, ಒಂದೊಮ್ಮೆ ಮಗಳು ಪ್ರಾಪ್ತ ವಯಸ್ಕಳಾದರೂ ಆಕೆ ತನ್ನ ಬದುಕನ್ನು ನೋಡಿಕೊಳ್ಳಲು ಸಮರ್ಥವಾಗಿಲ್ಲದಿದ್ದರೆ, ದೈಹಿಕ ಇಲ್ಲವೇ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಜೀವನಾಂಶಕ್ಕೆ ಅರ್ಹಳಾಗುತ್ತಾಳೆ ಎಂದು ಹೇಳಿದರು. ಹಿಂದೆ ಸುಪ್ರೀಂಕೋರ್ಟ್‌ ನೀಡಿದ ಕೆಲವು ತೀರ್ಪುಗಳನ್ನೂ ಅವರು ಉಲ್ಲೇಖಿಸಿದರು. ಮತ್ತು ಮನವಿಯನ್ನು ಮತ್ತೆ ಹೊಸದಾಗಿ ಪರಿಗಣಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಆದೇಶಿಸಿದರು.

– ಸಿಆರ್‌ಪಿಸಿಯಲ್ಲಿ ಅಪ್ರಾಪ್ತ ಮಕ್ಕಳಿಗೆ ಮಾತ್ರ ಜೀವನಾಂಶ ನೀಡಲು ಅವಕಾಶ

– ಮಗಳು ಪ್ರಾಪ್ತ ವಯಸ್ಕಳಾದರೂ ಆಕೆ ತನ್ನ ಬದುಕನ್ನು ನೋಡಿಕೊಳ್ಳಲು ಸಮರ್ಥವಾಗಿಲ್ಲದಿದ್ದರೆ, ದೈಹಿಕ ಇಲ್ಲವೇ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಜೀವನಾಂಶಕ್ಕೆ ಅರ್ಹಳಾಗುತ್ತಾಳೆ ಎಂದು ಬಾಂಬಯ ಹೈಕೋರ್ಟ್‌ ತೀರ್ಪು

Comments are closed.