ಮುಂಬೈ

75ನೇ ಮಹಡಿಯಿಂದ ಸೆಲ್ಫಿ ತೆಗೆದ ಯುವಕನಿಗೆ ಸಂಕಷ್ಟ

Pinterest LinkedIn Tumblr


ಮುಂಬಯಿ: ಅವನು ನಿಜಕ್ಕೂ ಒಂಥರಾ ಡೇರ್‌ ಡೆವಿಲ್‌. ವಯಸ್ಸಿನ್ನೂ 17 ವರ್ಷ. ಮುಂಬಯಿಯ 75 ಮಹಡಿಯಗಳ ಕಟ್ಟಡದ ತುತ್ತ ತುದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಂಡಿದ್ದಾನೆ. ಬರೀ ಸೆಲ್ಫಿಯಲ್ಲ. ನಿರ್ಮಾಣ ಹಂತದ ಕಟ್ಟಡದ ತಡೆಗೋಡೆಯ ಮೇಲೆ ನಿಂತು ಯಾವುದೇ ರಕ್ಷಣೆ ಇಲ್ಲದೆ ಆಕಾಶಕ್ಕೆ ಕಡ್ಡಿ ಇಟ್ಟು ತೆಗೆದ ಚಿತ್ರ ಮತ್ತು ವಿಡಿಯೊ ಅದು.

ಸಾಲದೆಂಬಂತೆ, ಅವೆಲ್ಲವನ್ನೂ ಯು-ಟ್ಯೂಬ್‌ನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಜನರೆಲ್ಲ ಅವನ ಸಾಹಸಕ್ಕೆ ಅಚ್ಚರಿ ಪಡುತ್ತಿದ್ದರೆ, ಪೊಲೀಸರು ಅವನ ಬೆನ್ನು ಹತ್ತಿದ್ದಾರೆ.

ಈ ಹುಡುಗನ ಹೆಸರು ಪ್ರಣಾಳ್‌ ಚವಾಣ್‌. ಬಿಇ ವಿದ್ಯಾರ್ಥಿ. ಅವನ ಸಾಹಸದ ಚಿತ್ರಗಳು, ವಿಡಿಯೊ ಹರಿದಾಡುತ್ತಿದ್ದಂತೆಯೇ ಪೊಲೀಸರು ಬೆನ್ನು ಹತ್ತಿದರು. ಭಯಗೊಂಡ ವಿದ್ಯಾರ್ಥಿ ತನ್ನೆಲ್ಲ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದಾನೆ.

ಪ್ರಣಾಳ್‌ ಚವಾಣ್‌ ತಾನು ಮಾಡಿರುವ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದಾನೆ. ಆದರೆ, ತನ್ನ ಪ್ರೀತಿಯ ಇಂಥ ಸಾಹಸವನ್ನು ಮಾತ್ರ ಮುಂದುವರಿಸುವುದಾಗಿ ಹೇಳಿದ್ದಾನೆ. ಇನ್ನು ಮುಂದೆ ಪರ್ಮಿಷನ್‌ ತೆಗೆದುಕೊಂಡೇ ಸಾಹಸಕ್ಕಿಳಿಯುತ್ತಾನಂತೆ ಈ ಹುಡುಗ.

ಇದು ಮೊದಲೇನಲ್ಲ

ಪರೇಲ್‌ ನಿವಾಸಿಯಾಗಿರುವ ಚವಾಣ್‌ ಹೇಳುವ ಪ್ರಕಾರ, ಅವನು ದೇಶದ ಏಕೈಕ ನಗರದ ಬಹುಮಹಡಿ ಕಟ್ಟಡ ಏರುವವನಂತೆ. ಕಟ್ಟಡದ ಮೇಲಿರುವ ಕ್ರೇನ್‌ಗಳ ತುದಿಗೆ ಹೋಗಿ ಫೋಟೋ ತೆಗೆಯುವುದು. ಕಟ್ಟಡದ ಅಂಚಿನಲ್ಲಿ ನಿಂತು ಚಿತ್ರೀಕರಣ ಮಾಡುವುದು ಮತ್ತು ಅವುಗಳನ್ನು ಯೂ ಟ್ಯೂಬ್‌, ಇನ್‌ಸ್ಟಾಗ್ರಾಂ, ವಾಟ್ಸ್ಯಾಪ್‌ಗಳಲ್ಲಿ ಶೇರ್‌ ಮಾಡುವುದು ಹವ್ಯಾಸ. ಈಗಾಗಲೇ ವರ್ಲಿ, ಲೋವರ್‌ ಪರೇಲ್‌ನಲ್ಲಿ ಮೂರು ಕಟ್ಟಡಗಳಿಂದ ಚಿತ್ರೀಕರಣ ನಡೆಸಿದ್ದಾನೆ. ನಿರ್ಮಾಣ ಹಂತದಲ್ಲಿರುವ 75 ಮಹಡಿಗಳ ಲೋಧಾ ಪಾರ್ಕ್‌ ಅವನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಚವಾಣ್‌ಗೆ ಈ ಹುಚ್ಚು ಹಿಡಿದದ್ದು ಟೀವಿಯಲ್ಲಿ ಸ್ಟಂಟ್‌ಗಳನ್ನು ನೋಡಿ. ಸಹಪಾಠಿಗಳು, ಶಾಲೆಯಲ್ಲಿ ಕೆಲವರು ಎಚ್ಚರಿಕೆ ನೀಡಿದರೂ ಅವನ ಮನಸು ಕೇಳಲಿಲ್ಲ. ಅಮ್ಮ ದೇವಿಯಾನಿ ಚವಾಣ್‌ಗೆ ಮಗನ ಸಾಹಸಗಳು ಗೊತ್ತಾದರೂ ಅದನ್ನು ಇಷ್ಟು ಸೀರಿಯಸ್‌ ಆಗಿ ತೆಗೆದುಕೊಂಡಿದ್ದಾನೆಂದು ಗೊತ್ತಿಲ್ಲವಂತೆ.

ಪೊಲೀಸರು ಬೆನ್ನು ಹತ್ತಿರುವುದು ಯಾಕೆಂದರೆ, ಇಷ್ಟೊಂದು ಅಪಾಯಕಾರಿ ಸ್ಟಂಟ್‌ ಗಳನ್ನು ಮಾಡಿದ್ದಕ್ಕೆ, ಅದಕ್ಕೆ ಅನುಮತಿ ಪಡೆಯದಿರುವುದಕ್ಕೆ ಮತ್ತು ವಿಡಿಯೊ, ಚಿತ್ರ ಹಂಚಿಕೆ ಮೂಲಕ ಯುವಜನತೆಗೆ ಅಪಾಯಕಾರಿ ತಪ್ಪು ಸಂದೇಶ ನೀಡಿದ್ದಕ್ಕೆ.

Comments are closed.