ರಾಷ್ಟ್ರೀಯ

ಬಹುಪತ್ನಿತ್ವ ನಿಷೇಧಕ್ಕೆ ಮುಸ್ಲಿಂ ಮಹಿಳೆಯರ ಆಗ್ರಹ

Pinterest LinkedIn Tumblr


ಹೊಸದಿಲ್ಲಿ: ತ್ರಿವಳಿ ತಲಾಕ್‌ ವಿರುದ್ಧ ಚಳುವಳಿ ನಡೆಸುತ್ತಿರುವ ಸರಕಾರೇತರ ಸಂಸ್ಥೆಯೊಂದು (ಎನ್‌ಜಿಒ), ಈ ಸಂಬಂಧ ನಿರ್ಬಂಧ ಹೇರಲು ಕೇಂದ್ರ ತಯಾರಿಸುತ್ತಿರುವ ಕರಡು ಪ್ರತಿಯನ್ನು ಸ್ವಾಗತಿಸಿದ್ದು, ಇದರೊಂದಿಗೆ ವಿಚ್ಚೇದನಕ್ಕೂ ಮುನ್ನ ಮಧ್ಯಸ್ಥಿಕೆಗೆ ಆದೇಶಿಸಬೇಕು, ‘ಹಲಾಲಾ’ ಹಾಗೂ ಬಹುಪತ್ನಿತ್ವವನ್ನು ನಿಷೇಧಿಸಬೇಕು ಎಂದೂ ಬೇಡಿಕೆ ಇಟ್ಟಿದೆ.

ಕರಡು ಪ್ರತಿಯಂತೆ, ಹಠಾತ್‌ ತಲಾಕ್‌ ನೀಡುವುದು ಕಾನೂನುಬಾಹಿರವಾಗಿದ್ದು, ಪತಿಗೆ ಗರಿಷ್ಠ ಮೂರು ವರ್ಷ ಜೈಲುಶಿಕ್ಷೆ ವಿಧಿಸಬಹುದಾಗಿದೆ.

ಸಂತ್ರಸ್ತೆಗೆ ಸಾಮಾಜಿಕ ಭದ್ರತೆ ಹಾಗೂ ಇತರೆ ಸುರಕ್ಷ ತಾ ಕಟ್ಟಳೆಯೊಂದಿಗೆ, ಪತ್ನಿಗೆ ಅಪ್ರಾಪ್ತ ಮಕ್ಕಳನ್ನು ತನ್ನೊಂದಿಗಿರಿಸಿಕೊಳ್ಳುವುದು ಮತ್ತು ಜೀವನ ನಿರ್ವಹಣಾ ವೆಚ್ಚಕ್ಕೆ ಆಗ್ರಹಿಸುವ ಆಯ್ಕೆಯನ್ನು ಹೊಸ ಕರಡು ಪ್ರತಿಯಲ್ಲಿ ಸೇರಿಸಲಾಗಿದೆ.

”ಕರಡನ್ನು ನಾವು ಸ್ವಾಗತಿಸುತ್ತೇವೆ. ಆದರೆ, ತ್ರಿವಳಿ ತಲಾಕ್‌ ಅಪರಾಧ ಎಂದಿರುವ ಕರಡಿನಲ್ಲಿ ಬದಲಿ ವಿಚ್ಚೇದನ ವಿಧಾನವನ್ನು ನೀಡಿಲ್ಲ,” ಎಂದು ಭಾರತೀಯ ಮುಸ್ಲಿಂ ಮಹಿಳಾ ಆಂಧೋಲನ (ಬಿಎಂಎಂಎ) ಹೇಳಿಕೆ ಬಿಡುಗಡೆ ಮಾಡಿದೆ.

‘ಅಹ್ಸಾನ್‌ ವಿಧಾನ’ದ ವಿಚ್ಚೇದನವನ್ನು ಅಳವಡಿಸುವಂತೆ ಎನ್‌ಜಿಒ ಕೋರಿದ್ದು, ಅದರಂತೆ ವಿಚ್ಛೇದನ ಪ್ರಕ್ರಿಯೆ ಆರಂಭವಾಗುವ ಮೊದಲು ಕನಿಷ್ಠ 90 ದಿನಗಳನ್ನು ಮಧ್ಯಸ್ಥಿಕೆ ಆಯ್ಕೆಗೆ ಬಿಡಲಾಗುತ್ತದೆ.

ಸುಮಾರು 70,000 ಮುಸ್ಲಿಂ ಮಹಿಳಾ ಸದಸ್ಯರನ್ನು ಹೊಂದಿರುವ ಸಂಸ್ಥೆಯು ಹಲಾಲಾ, ಮುಟಾ ವಿವಾಹ, ಬಹುಪತ್ನಿತ್ವವನ್ನೂ ನಿಷೇಧಿಸಬೇಕೆಂದು ಬೇಡಿಕೆ ಇಟ್ಟಿದೆ.

ಜೊತೆಗೆ, ಕನಿಷ್ಠ ವಿವಾಹ ವಯಸ್ಸು, ವರದಕ್ಷಿಣೆ ಮೌಲ್ಯ, ವಿಧವೆಯರು ಅಥವಾ ವಿಚ್ಚೇದಿತ ಮಹಿಳೆಯರ ಹಕ್ಕುಗಳು ಇತ್ಯಾದಿಗಳನ್ನೂ ಕರಡಿನಲ್ಲಿ ಸೇರಿಸುವಂತೆ ಕೋರಿದೆ.

Comments are closed.