ಮುಂಬೈ

ರೈಲಿನಲ್ಲಿ ಬಳಸಿ ಎಸೆಯುವ ಟವೆಲ್‌, ಪಿಲ್ಲೊ ಕವರ್‌

Pinterest LinkedIn Tumblr


ಮುಂಬಯಿ: ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಳಸಿ ಎಸೆಯುವ ಪರಿಸರ ಸ್ನೇಹಿ ಟವೆಲ್‌ ಮತ್ತು ದಿಂಬು ಕವರ್‌ಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತಿದೆ.

ಸ್ವಚ್ಛತೆಗೆ ಸಂಬಂಧಿಸಿದಂತೆ ಕೇಳಿ ಬರುವ ದೂರುಗಳು, ಟವೆಲ್‌, ಕವರ್‌ಗಳು ಕಳವಾಗುವುದು ಕಡಿಮೆಯಾಗುವ ಜತೆಗೆ ಹಣ ಉಳಿತಾಯಕ್ಕೂ ಈ ಕ್ರಮ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ಅಕ್ಟೋಬರ್‌ 16ರಿಂದ ಬಾಂದ್ರಾ- ಹಜರತ್‌ ನಿಜಾಮುದ್ದೀನ್‌ ಮಧ್ಯೆ ಥರ್ಡ್‌ ರಾಜಧಾನಿ ಎಕ್ಸ್‌ಪ್ರೆಸ್‌ ಸಂಚರಿಸುತ್ತಿದ್ದು, ಇದರಲ್ಲಿ ಬಳಸಿ ಎಸೆಯುವ ಪರಿಸರ ಸ್ನೇಹಿ ಟವೆಲ್‌ ಮತ್ತು ದಿಂಬು ಕವರ್‌ಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತಿದೆ.

ಪಶ್ಚಿಮ ವಲಯ ರೈಲ್ವೆಯ ಮುಂಬಯಿ ವಿಭಾಗದಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ತಿಂಗಳಿಗೆ ಕನಿಷ್ಠ ಐದು ದೂರುಗಳು ಬರುತ್ತಿವೆ. ತಿಂಗಳಿಗೆ ಕನಿಷ್ಠ 70 ಟವೆಲ್‌ಗಳು ಕಳವಾಗುತ್ತಿವೆ. ಕೆಲವು ಪ್ರಯಾಣಿಕರು ಟವೆಲ್‌ಗಳಲ್ಲಿ ಷೂ ಒರೆಸುವುದರಿಂದ ಅವು ಲಾಂಡ್ರಿಯಲ್ಲಿ ಸರಿಯಾಗಿ ಸ್ವಚ್ಛಗೊಳ್ಳುವುದಿಲ್ಲ. ಆದರೂ ಶೇ 90% ಪ್ರಯಾಣಿಕರು ರಾಜಧಾನಿ ಎಕ್ಸ್‌ಪ್ರಸ್‌ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ನೀಡುತ್ತಾರೆ ಎಂದು ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ರವೀಂದರ್‌ ಭಕರ್‌ ಹೇಳುತ್ತಾರೆ.

ಈ ಸೌಲಭ್ಯವನ್ನು ಇತರ ರೈಲುಗಳಿಗು ವಿಸ್ತರಿಸುವ ಮೊದಲು ರೈಲ್ವೆ ಮಂಡಳಿ ಬಹಳಷ್ಟು ಪ್ರಾಯೋಗಿಕ ಕಸರತ್ತು ನಡೆಸುತ್ತಿದೆ. ಬಳಸಿ ಎಸೆಯುವ ಈ ಟವೆಲ್‌ಗಳಿಗೆ ಮಣ್ಣಿನಲ್ಲಿ ಕರಗುವಂಥ ಹತ್ತಿಯನ್ನೇ ಬಳಸಲಾಗುವುದು. ಒಂದು ಸುತ್ತಿನ ಪ್ರಯಾಣದಲ್ಲಿ 2,300 ಟವೆಲ್‌, ಪಿಲ್ಲೊ ಕವರ್‌ ಪ್ರಯಾಣಿಕರಿಗೆ ನೀಡಲಾಗುವುದು ಎಂದು ರೈಲ್ವೆಯ ಮಾರ್ಕೆಟಿಂಗ್‌,ಇನ್ನೊವೇಶನ್‌, ಪ್ರಾಡಕ್ಟ್‌ ವಿಭಾಗದ ಹಿರಿಯ ಮ್ಯಾನೇಜರ್‌ ದಯಾಳ್‌ ಮೆಹತಾ ವಿವರಿಸಿದರು.

ಇವು ಯಾವುದೇ ಮಾಲಿನ್ಯಕಾರಕ, ರಾಸಾಯನಿಕ ಮತ್ತು ಬಣ್ಣಕಾರಕಗಳಿಂದ ಮುಕ್ತವಾಗಿರುತ್ತದೆ. ತೊಳೆದು ನಿರ್ವಹಿಸುವ ಟವೆಲ್‌ ವೆಚ್ಚ ಆರು ರೂ. ಆದರೆ ಬಳಸಿ ಎಸೆಯುವುದಕ್ಕೆ ಆಗುವ ವೆಚ್ಚ 4.75 ರೂ. ಎಂದು ಅವರು ಹೇಳುತ್ತಾರೆ.

Comments are closed.