ಕರ್ನಾಟಕ

ಕೊನೆಗೂ ಗೂಗಲ್‌ ನಕ್ಷೆಯಲ್ಲಿ “ಕೆಟ್ಟ’ ಕನ್ನಡ!

Pinterest LinkedIn Tumblr


ಬೆಂಗಳೂರು: ಕನ್ನಡ ಮಾಸ ನವೆಂಬರ್‌ನಲ್ಲಿ ಗೂಗಲ್‌, ನಾಡಿನ ಜನತೆಗೊಂದು ಸಿಹಿಸುದ್ದಿ ಕೊಟ್ಟಿದೆ. ಗೂಗಲ್‌ ನಕ್ಷೆಯಲ್ಲಿ ಇಷ್ಟು ದಿನ ಕೇವಲ ಇಂಗ್ಲಿಷ್‌ ಭಾಷೆಯಲ್ಲಿದ್ದ ಕರುನಾಡಿನ ಸ್ಥಳಗಳು ಶುಕ್ರವಾರದಿಂದ ಕನ್ನಡದಲ್ಲೂ ಕಾಣಿಸಿಕೊಳ್ಳುತ್ತಿವೆ. ಭಾರತದ ಕೆಲವೇ ಪ್ರಾಂತೀಯ ಭಾಷೆಗಳಿಗೆ ಸಿಕ್ಕಿದ್ದ ಗೂಗಲ್‌ ಗೌರವಕ್ಕೆ ಈಗ ಕನ್ನಡ ಪಾತ್ರವಾಗಿದೆ. 12 ವರ್ಷಗಳ ಹಿಂದಷ್ಟೇ ಆರಂಭವಾದ
ಗೂಗಲ್‌ ನಕ್ಷೆಗೆ 2014ರಲ್ಲಿ ಭಾರತದ ಮೊದಲ ಭಾಷೆ ಯಾಗಿ ಹಿಂದಿ ಸೇರ್ಪಡೆಗೊಂಡಿತ್ತು. ನಂತರ ಬಂಗಾಳಿ, ತಮಿಳು, ತೆಲುಗು, ರಾಜಸ್ಥಾನಿ, ಪಂಜಾಬಿ ಭಾಷೆಗಳಿಗೆ ಮನ್ನಣೆ ಸಿಕ್ಕಿತ್ತು. ಗೂಗಲ್‌ನಲ್ಲಿ ಕನ್ನಡ ಕೊಂಡಿಗಳು ಸೇರಿಕೊಂಡರೂ, ನಕ್ಷೆಗೆ ಪ್ರಾಧಾನ್ಯತೆ ಸಿಕ್ಕಿರಲಿಲ್ಲ.

ಸಹಿ ಚಳವಳಿಗೆ ಮಣಿದ ಗೂಗಲ್‌: ಈ ವರ್ಷದ ಆರಂಭದಲ್ಲಿಯೇ ಚೇಂಜ್‌.ಆರ್ಗ್‌ ವತಿಯಿಂದ ಗೂಗಲ್‌ ನಕ್ಷೆಯಲ್ಲಿ ಕನ್ನಡ ಭಾಷೆಗೆ ಮಾನ್ಯತೆ ನೀಡುವಂತೆ ಆನ್‌ಲೈನ್‌ ಸಹಿ ಚಳವಳಿ ನಡೆದಿತ್ತು. ನಕ್ಷೆಯಲ್ಲಿ ಕನ್ನಡದ ಅಗತ್ಯತೆ ಕುರಿತು ಕನ್ನಡ ಗ್ರಾಹಕರ ಕೂಟ ಕೂಡ ಗೂಗಲ್‌ನ ಗಮನಕ್ಕೆ ತಂದಿತ್ತು. ಕೊನೆಗೂ ಈ ಪ್ರಯತ್ನಕ್ಕೆ ಫ‌ಲ ಸಿಕ್ಕಂತಾಗಿದೆ.

ದೋಷಗಳ ಕೊಡುಗೆ!: ನಕ್ಷೆಯಲ್ಲಿ ಕನ್ನಡವೇನೋ ಸೇರಿದೆ ಸರಿ, ಆದರೆ ಅಲ್ಲಿನ ಅಕ್ಷರ ತಪ್ಪುಗಳು ಭಾಷಾ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ತುಮಕೂರ, ಹೆಬ್ರೆ, ಬಜೆಗೊಲಿ, ಯದಮರಣಹಳ್ಳಿ, ಮಸ್ತಿ, ರಮಸಮುದ್ರಂ, ಕೊಡಿಹಳ್ಳಿ, ಮಲಗಿ, ಅಕ್ಕಿ ಅಳುರ್‌, ಮತ್ತೂದು, ಬೇಗುರ್‌, ಕಡಿರಿಹಳ್ಳಿ, ಬಲೆಹೊನ್ನುರ್‌, ಗೊರುರ್‌… ಹೀಗೆ ಅಕ್ಷರ ತಪ್ಪುಗಳ ದೊಡ್ಡ ಪಟ್ಟಿ ಇಲ್ಲಿ ಸಿಗುತ್ತದೆ. “ಗೂಗಲ್‌ ಭಾಷಾಂತರದ ಪ್ರಮಾದ ಇದಾಗಿರಬಹುದು. ಮೊದಲ ಆವೃತ್ತಿಯಾದ್ದರಿಂದ ಕೆಲವು ತಪ್ಪುಗಳು ಕಂಡುಬಂದಿವೆ. ಹೆಚ್ಚು
ಕನ್ನಡಿಗರು ಬಳಸಿ, ಈ ಬಗ್ಗೆ ಅಗತ್ಯ ಸಲಹೆ ಕೊಡುವ ಮೂಲಕ ಗೂಗಲ್‌ ಈ ಪ್ರಮಾದವನ್ನು ಸರಿಪಡಿಸಿಕೊಳ್ಳಲಿದೆ’ ಎನ್ನುತ್ತಾರೆ, ಗೂಗಲ್‌ ನಕ್ಷೆಯ ರೀತಿ ವೇಝ್ ದಿಕ್ಸೂಚಿ ರಚಿಸಿರುವ ಸುಹ್ರುತಾ ಯಜಮಾನ್‌.

ಗೂಗಲ್‌ ನಕ್ಷೆ ಕನ್ನಡದಲ್ಲಿ ಬಂದಿರುವುದು ಒಳ್ಳೆಯ ಬೆಳವಣಿಗೆ. ಸದ್ಯದ ನಕ್ಷೆಯಲ್ಲಿ ಆಗಿರುವ ಪ್ರಮಾದಗಳನ್ನು ಗೂಗಲ್‌ ಆದಷ್ಟು ಬೇಗ ತಿದ್ದಿಕೊಳ್ಳಲಿ.
●ಸುಹ್ರುತಾ ಯಜಮಾನ್‌, ಕನ್ನಡ ಗ್ರಾಹಕರ ಕೂಟ

-ಉದಯವಾಣಿ

Comments are closed.