ಮುಂಬೈ

ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯ: ಆರ್‌ಬಿಐ

Pinterest LinkedIn Tumblr

ಮುಂಬಯಿ: ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆಯ ಜೋಡಣೆ ಕಡ್ಡಾಯ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಶನಿವಾರ ಹೇಳಿದೆ.

ಮಾಹಿತಿ ಹಕ್ಕಿನ ಕಾಯ್ದೆಯಡಿ ಪಡೆದ ಉತ್ತರವನ್ನು ಉಲ್ಲೇಖಿಸಿ ಪ್ರಕಟವಾದ ಮಾಧ್ಯಮ ವರದಿಗಳಿಗೆ ಆರ್‌ಬಿಐ ಈ ಸ್ಪಷ್ಟೀಕರಣ ನೀಡಿದೆ.

ಆರ್‌ಟಿಐ ಮಾಹಿತಿ ಎಂದು ಹೇಳಿಕೊಂಡು ಕೆಲವು ಮಾಧ್ಯಮಗಳು, ಬ್ಯಾಂಕ್ ಖಾತೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯವಲ್ಲ ಎಂದು ವರದಿ ಮಾಡಿದ್ದವು.

‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಎರಡನೇ ತಿದ್ದುಪಡಿ ನಿಯಮ-2017 ಅನ್ವಯ ಅನ್ವಯವಾಗುವ ಎಲ್ಲಾ ಪ್ರಕರಣಗಳಲ್ಲೂಆಧಾರ್‌ ಸಂಖ್ಯೆ ಜೋಡಣೆ ಕಡ್ಡಾಯ’ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಈ ನಿಯಮಗಳು ಶಾಸನಬದ್ಧವಾಗಿ ಜಾರಿಯಲ್ಲಿದ್ದು, ಎಲ್ಲ ಬ್ಯಾಂಕುಗಳು ಮುಂದಿನ ಸೂಚನೆಗೆ ಕಾಯದೆ ಇದನ್ನು ಅನುಷ್ಠಾನಗೊಳಿಸಬೇಕು ಎಂದು ಆರ್‌ಬಿಐ ಸೂಚಿಸಿದೆ.

ಬ್ಯಾಂಕ್‌ ಖಾತೆಗಳನ್ನು ತೆರೆಯಲು ಹಾಗೂ 50 ಸಾವಿ ರೂ.ಗಳಿಗಿಂತ ಹೆಚ್ಚಿನ ಯಾವುದೇ ವಹಿವಾಟಿಗೆ ಆಧಾರ್‌ ಸಂಖ್ಯೆ ನಮೂದಿಸುವುದನ್ನು ಸರಕಾರ ಕಡ್ಡಾಯಗೊಳಿಸಿದೆ.

ಈಗಾಗಲೇ ಬ್ಯಾಂಕ್‌ ಖಾತೆ ಹೊಂದಿರುವವರು 2017ರ ಡಿಸೆಂಬರ್‌ 31ರ ಮೊದಲು ಆಧಾರ್‌ ಸಂಖ್ಯೆಯನ್ನು ಬ್ಯಾಂಕುಗಳಿಗೆ ನೀಡುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ಅಂತಹ ಖಾತೆಗಳನ್ನು ಸ್ತಂಭನಗೊಳಿಸಲಾಗುವುದು ಎಂದು ಸರಕಾರದ ಅಧಿಸೂಚನೆ ತಿಳಿಸಿದೆ.

ತೆರಿಗೆ ವಂಚನೆ ತಡೆಯಲು ಪಾನ್‌ ಕಾರ್ಡ್‌ ಜತೆಗೆ ಆಧಾರ್‌ ಜೋಡಣೆಯನ್ನು ಕಡ್ಡಾಯಗೊಳಿಸಿರುವುದಾಗಿ ಸರಕಾರ 2017ರ ಬಜೆಟ್‌ನಲ್ಲೇ ಪ್ರಕಟಿಸಿತ್ತು.

Comments are closed.