ಮುಂಬೈ

ರಕ್ಷಣಾ ಸಚಿವ ಮನೋಹರ್ ಪರಿಕ್ಕರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಶಿವಸೇನೆ

Pinterest LinkedIn Tumblr

ಮುಂಬೈ: ನೋಟು ನಿಷೇಧದ ಬಳಿಕ ಉಗ್ರರ ದಾಳಿ ಹೆಚ್ಚಾಗುತ್ತಿರುವುದಕ್ಕೆ ತೀವ್ರವಾಗಿ ಕಿಡಿಕಾರಿರುವ ಶಿವಸೇನೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ ವಿರುದ್ಧ ಮಂಗಳವಾರ ತೀವ್ರವಾಗಿ ವಾಗ್ದಾಳಿ ನಡೆಸಿದೆ.

ಈ ಕುರಿತಂತೆ ತನ್ನ ಮುಖಪುಟ ಸಾಮ್ನಾ ಸಂಪಾದಕೀಯದಲ್ಲಿ ಬರೆದುಕೊಂಡಿರುವ ಶಿವಸೇನೆ, ನೋಟು ನಿಷೇಧ ನಿರ್ಧಾರ ಭಯೋತ್ಪಾದನೆ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ. ನೋಟು ನಿಷೇಧದ ಬಳಿಕವೂ ಉಗ್ರರ ದಾಳಿ ಪ್ರಕರಣಗಳು ಹೆಚ್ಚಾಗಿದೆ. ಕೇಂದ್ರದ ನಿಷೇಧ ನಿರ್ಧಾರದಿಂದ ಭಯೋತ್ಪಾದನಾ ಚಟುವಟಿಕೆಗಳು ನಿಯಂತ್ರಣಗೊಂಡಿದೆ ಎಂಬ ಹೇಳಿಕೆ ನಡುವೆಯೇ ಅಖ್ನೂರ್ ನಲ್ಲಿ ಉಗ್ರರು ದಾಳಿ ನಡೆಸಿ 3 ಯೋಧರನ್ನು ಬಲಿ ಪಡೆದುಕೊಂಡಿದ್ದಾರೆಂದು ಹೇಳಿಕೊಂಡಿದೆ.

ಭಾರತೀಯ ಸೇನೆಯನ್ನು ನಾವು ಪ್ರಶ್ನೆ ಮಾಡುತ್ತಿಲ್ಲ. ಆದರೆ, ರಾಜಕೀಯ ಗಣ್ಯರು ಭಾರತೀಯ ಸೇನೆಯ ವರ್ಚಸ್ಸನ್ನು ಮಣ್ಣುಪಾಲಾಗದಂತೆ ನೋಡಿಕೊಳ್ಳಬೇಕಿದೆ. ರಾಜಕೀಯ ನಾಯಕರು ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುವ ಸಲುವಾಗಿ ಭಾರತೀಯ ಸೇನೆಯನ್ನು ಮಧ್ಯಕ್ಕೆ ಎಳೆಯುತ್ತಿದ್ದು, ಈ ಬಗ್ಗೆ ಸೇನೆ ಕೂಡ ಬಹಳ ಎಚ್ಚರವಹಿಸಬೇಕಿದೆ.

ಬಿಜೆಪಿ ನಾಯಕರು ಸೀಮಿತ ದಾಳಿಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದು, ಕೇಂದ್ರಕ್ಕೆ ನಿಜಕ್ಕೂ ಧೈರ್ಯವಿರುವುದೇ ಆದರೆ, ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಿ, ರಾಮಮಂದಿರವನ್ನು ನಿರ್ಮಾಣ ಮಾಡಲಿ ಎಂದು ಶಿವಸೇನೆ ಸವಾಲು ಹಾಕಿದೆ.

ನೋಟು ನಿಷೇಧ ನಿರ್ಧಾರ ಹಿಡಿದು ರಾಜಕೀಯ ಮಾಡುವುದನ್ನು ಕೇಂದ್ರ ಸರ್ಕಾರ ಬಿಡಬೇಕು. ಹಾಗೂ ನವೆಂಬರ್ 8ರಂದು ತೆಗೆದುಕೊಂಡ ನಿರ್ಧಾರದ ಬಳಿ ಎಷ್ಟು ಯೋಧರು ಹುತಾತ್ಮರಾಗಿದ್ದಾರೆಂಬ ಅಂಕಿಅಂಶವನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದೆ.

Comments are closed.