ಮುಂಬೈ: ಚಿಕ್ಕಮಗಳೂರಿನಲ್ಲಿ ಪತ್ತೆಯಾದ 2 ಸಾವಿರ ರೂಪಾಯಿಯ ಕಲರ್ ಜೆರಾಕ್ಸ್ ನೋಟು ದೇಶಾದ್ಯಂತ ಸಂಚಲನ ಮೂಡಿಸಿದ ಬೆನ್ನಲ್ಲೇ ಮುಂಬೈನಲ್ಲಿ ಇಂಥದ್ದೇ ಒಂದು ಪ್ರಕರಣ ಪತ್ತೆಯಾಗಿದೆ. ಹೊಸ 2 ಸಾವಿರ ರೂ. ನೋಟಿನ ಕಲರ್ ಜೆರಾಕ್ಸ್ ಮಾಡಿ ಬಿಯರ್ ಕೊಳ್ಳಲು ಮುಂದಾದ ಯುವಕನೊಬ್ಬ ಜೈಲು ಸೇರಿದ್ದಾನೆ.
ಆಗಿದ್ದೇನು?: ಕಳೆದ ಭಾನುವಾರ ವಿರಾರ್‍ನಲ್ಲಿರುವ ರಾಜ್ ವೈನ್ ಶಾಪ್‍ನಲ್ಲಿ ಬಿಯರ್ ಖರೀದಿಸಲು 24 ವರ್ಷದ ತುಷಾರ್ ಚಿತಾಲೆ ಆಗಮಿಸಿದ್ದಾನೆ. ಈ ವೇಳೆ ಈತ 2000 ರೂ.ಗಳ ಹೊಸ ನೋಟು ನೀಡಿದ್ದಾನೆ. ಆದರೆ ನೋಟು ಕೈಗೆ ಸಿಗುತ್ತಿದ್ದಂತೆ ಸ್ಟೋರ್ ಮ್ಯಾನೇಜರ್‍ಗೆ ಅನುಮಾನ ಮೂಡಿದೆ. ತಕ್ಷಣ ಆತ ವೈನ್ ಶಾಪ್ ಮಾಲೀಕ ಸುಧೀರ್ ಶೆಟ್ಟಿ ಅವರಿಗೆ ವಿಷಯ ತಿಳಿಸಿದ್ದಾನೆ. ಬಳಿಕ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ನೋಡಿದಾಗ ನೋಟು ನಕಲಿ ಎಂಬುದನ್ನು ಖಚಿತಪಡಿಸಿದ್ದಾರೆ.
ಕೇಂದ್ರ ಸರ್ಕಾರ 500 ಹಾಗೂ 1 ಸಾವಿರ ರೂ. ಬ್ಯಾನ್ ಮಾಡಿ 2000 ರೂ.ಗಳ ನೋಟು ಬಿಡುಗಡೆ ಮಾಡಿದ ದಿನದಿಂದ ನಾವು ನಮ್ಮ ಶಾಪ್‍ಗೆ ಬರುವ ಎಲ್ಲ ನೋಟುಗಳನ್ನೂ ಸೂಕ್ಷ್ಮವಾಗಿ ಪರಿಶೋಧಿಸುತ್ತಿದ್ದೇವೆ. ನೋಟು ಕೈಗೆ ಸಿಗುತ್ತಿದ್ದಂತೆ ನಮಗೆ ಅದು ಅಸಲಿ ಅಥವಾ ನಕಲಿ ಎಂದು ಗೊತ್ತಾಗುತ್ತಿತ್ತು. ಅಸಲಿ ನೋಟಿನ ಪೇಪರ್ ಗುಣಮಟ್ಟಕ್ಕೂ, ನಕಲಿ ನೋಟಿನ ಪೇಪರ್‍ಗೂ ತುಂಬಾ ವ್ಯತ್ಯಾಸವಿದೆ ಎಂದು ಸುಧೀರ್ ಶೆಟ್ಟಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರಾರ್ ಪೊಲೀಸ್ ಇನ್ಸ್‍ಪೆಕ್ಟರ್ ಯೂನಸ್ ಶೇಖ್, ಐಪಿಸಿ ಕಾಯ್ದೆಯ ಪ್ರಕಾರ ನಾವು ದೂರು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದೇವೆ. ವಿಚಾರಣೆ ವೇಳೆ ಆರೋಪಿ ತುಷಾರ್ ಚಿತಾಲೆ, 2 ಸಾವಿರ ರೂ. ನೋಟಿನ ಜೆರಾಕ್ಸ್ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.