ಮುಂಬೈ: ಗಡಿಯಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನದ ಪುಂಡಾಟಕ್ಕೆ ತಕ್ಕ ಪ್ರತ್ಯುತ್ತರ ನೀಡುವ ನಿಟ್ಟಿನಲ್ಲಿ ಭಾರತೀಯ ಸೇನೆ ಎಲ್ ಒಸಿಗೆ ನುಗ್ಗಿ ಸರ್ಜಿಕಲ್(ಸೀಮಿತ) ದಾಳಿ ನಡೆಸಿದ ರೀತಿಯಲ್ಲೇ ಚೀನಾದ ಮೇಲೂ ಈ ರೀತಿ ದಾಳಿ ನಡೆಸುತ್ತೀರಾ ಎಂದು ಶಿವಸೇನೆ ಶನಿವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಭಾರತದ ಗಡಿಯೊಳಗೆ ಅತಿಕ್ರಮಣ ಪ್ರವೇಶ ಮಾಡುತ್ತಿರುವ ಚೀನಾದ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕಾದ ಕಾಲ ಸನ್ನಿಹಿತವಾಗಿದೆ.ಹಾಗಾಗಿ ಪಾಕ್ ಮೇಲೆ ನಡೆಸಿದ ಸರ್ಜಿಕಲ್ ದಾಳಿಯಂತೆ ಚೀನಾದ ಮೇಲೂ ನಡೆಸಿ ತಕ್ಕ ಉತ್ತರ ನೀಡುತ್ತೀರಾ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ.
ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಪಾಕಿಸ್ತಾನದ ವಿರುದ್ಧ ಒಂದು ಮಾತನಾಡಿದರೂ, ಭರ್ಜರಿ ಚಪ್ಪಾಳೆ ಸಿಗುತ್ತದೆ. ಆ ನೆಲೆಯಲ್ಲಿ ಈ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಮನಸ್ಥಿತಿಯಿಂದ ಹೊರಬರಬೇಕಾದ ಅಗತ್ಯವಿದೆ. ಜೊತೆಗೆ ಚೀನಾ ಅತಿಕ್ರಮ ಪ್ರವೇಶವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಶಿವಸೇನೆ ಸಲಹೆ ನೀಡಿದೆ.
ಕಳೆದ ಕೆಲವು ವರ್ಷಗಳಿಂದ ಲಡಾಖ್ ನಿಂದ ಅರುಣಾಚಲ ಹಾಗೂ ಸಿಕ್ಕಿಂನಲ್ಲಿ ಚೀನಾ ಈ ರೀತಿ ಉದ್ಧಟತನ ತೋರುತ್ತಿದೆ. ಹಾಗಾದರೆ ಚೀನಾದ ಪುಂಡಾಟವನ್ನು ನಿಜವಾಗಿಯೂ ನಿಲ್ಲಿಸುವವರು ಯಾರು ಎಂಬುದೇ ಪ್ರಶ್ನೆಯಾಗಿದೆ ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಿದೆ.
Comments are closed.