ಮುಂಬೈ

ಮರಾಠ-ದಲಿತರ ಮಧ್ಯೆ ಭುಗಿಲೆದ್ದ ಗಲಾಟೆ; ಪುಣೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ

Pinterest LinkedIn Tumblr

bhiwandi

ಪುಣೆ: ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಮರಾಠರು ಕೆಲ ದಿನಗಳ ಹಿಂದೆ ಪುಣೆಯಲ್ಲಿ ನಡೆಸಿದ್ದ ಬೃಹತ್ ರ್ಯಾಲಿ ಹಿನ್ನೆಲೆಯಲ್ಲಿ ಗುರುವಾರ ಮರಾಠ ಸಮುದಾಯದ ಸದಸ್ಯರು ಹಾಗೂ ದಲಿತರ ನಡುವೆ ಸಂಘರ್ಷ ಏರ್ಪಟ್ಟಿದೆ. ಪರಿಣಾಮ ಪುಣೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ಪುಣೆಯಲ್ಲಿ ಬೃಹತ್ ರ್ಯಾಲಿಯನ್ನು ನಡೆಸಲಾಗಿತ್ತು. ಇದರ ಹಿನ್ನೆಲೆಯಲ್ಲಿ ಲೋಹೇಗಾಂವ್ ಪ್ರದೇಶದಲ್ಲಿ ಮರಾಠ ಸಮುದಾಯದವರು ಹಾಗೂ ದಲಿತರ ನಡುವೆ ಸಂಘರ್ಷ ಏರ್ಪಟ್ಟಿದೆ ಎಂದು ಖಾಸಗಿ ಮಾಧ್ಯಮವೊದು ವರದಿ ಮಾಡಿದೆ.

ಎಸ್’ಸಿ/ಎಸ್’ಟಿ ಕಾಯ್ದೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಮರಾಠ ಸಮುದಾಯದವರು ಇಂದು ಲೋಹೇಗಾಂವ್ ಪೊಲೀಸ್ ಠಾಣೆಗೆ ಮೆರವಣಿಗೆ ನಡೆಸಿದ್ದರು. ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡ ದಲಿತರು ಮರಾಠರೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆ ವೇಳೆ ಹಲವರಿಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

ಮರಾಠರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ನಾಶಿಕ್ ನಲ್ಲಿ ನಡೆಸಲಾಗುತ್ತಿರುವ ಬಂದ್ 5ನೇ ದಿನಕ್ಕೆ ಕಾಲಿಟ್ಟಿದೆ. ಇದರ ನಡುವೆಯೇ ಇದೀಗ ಮತ್ತೊಂದು ಸಂಘರ್ಷ ನಡೆದಿದೆ. ಪ್ರಸ್ತುತ ನಾಶಿಕ್ ನಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

Comments are closed.