ಮುಂಬೈ:ಹಣ ದುರುಪಯೋಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಮನವಿಯ ವಿಚಾರಣೆ ನಡೆಸಿದ ಮುಂಬೈ ವಿಶೇಷ ನ್ಯಾಯಾಲಯ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸಿದೆ.
ಮಲ್ಯ ವಿರುದ್ಧ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುವಂತೆ ಮತ್ತು ಬ್ಯಾಂಕ್ ಸಾಲ ಮರುಪಾವತಿಸುವ ಕುರಿತು ಭಾರತಕ್ಕೆ ಹಿಂದಿರುಗುವಂತೆ ಮಲ್ಯಗೆ ನೀಡಿದ್ದ ನಿರಂತರ ಕೋರ್ಟ್ ಆದೇಶವನ್ನು ನಿರ್ಲಕ್ಷಿಸಿದ್ದಾರೆ. ಹಾಗಾಗಿ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸಬೇಕೆಂದು ಕೋರ್ಟ್ ಗೆ ಇಡಿ ಮನವಿ ಮಾಡಿತ್ತು.
ಲಂಡನ್ ನಲ್ಲಿ ವಾಸ್ತವ್ಯ ಹೂಡಿರುವ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಇಂಟರ್ ಪೋಲ್ ಅನ್ನು ಈಗಾಗಲೇ ಸಂಪರ್ಕಿಸಲಾಗಿದೆ ಎಂದು ಇಡಿ ಕೋರ್ಟ್ ಗೆ ತಿಳಿಸಿದೆ. ಮಲ್ಯ ಪಾಸ್ ಫೋರ್ಟ್ ಅನ್ನು ಏಪ್ರಿಲ್ ನಲ್ಲಿ ರದ್ದುಗೊಳಿಸಲಾಗಿದೆ. ಅಲ್ಲದೇ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಬ್ರಿಟನ್ ಗೆ ಮನವಿ ಮಾಡಲಾಗಿದೆ.
ಏತನ್ಮಧ್ಯೆ ಗಡಿಪಾರು ಕುರಿತ ಉಭಯ ದೇಶಗಳ ನಡುವಿನ ಪ್ರಕ್ರಿಯೆ ಇನ್ನಷ್ಟು ಚುರುಕುಗೊಳಿಸಲು ಘೋಷಿತ ಅಪರಾಧಿ ಎಂದು ಆದೇಶ ನೀಡುವಂತೆ ಇಡಿ ಮನವಿ ಮಾಡಿತ್ತು. ದೇಶದ ಕಾನೂನಿನ ಪ್ರಕಾರ ಮಲ್ಯ ಅವರನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ ಎಂದು ಬ್ರಿಟನ್ ಭಾರತಕ್ಕೆ ತಿಳಿಸಿತ್ತು. ಆದರೆ ಈ ಪ್ರಕ್ರಿಯೆಗಳೆಲ್ಲ ಗಡಿಪಾರಿಗೆ ನೆರವಾಗುತ್ತದೆ ಎಂದು ಇಡಿ ಹೇಳಿದೆ.
ಹಾಗಾಗಿ ಮಲ್ಯ ಅವರನ್ನು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಬಾಕಿ ಇರುವ ಕಾನೂನು ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಿದ್ದೇವೆ ಎಂದು ಕಳೆದ ವಾರ ಸಚಿವ ಜಯಂತ್ ಸಿಂಗ್ ತಿಳಿಸಿದ್ದರು. ಇದರಿಂದಾಗಿ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಭಾರತ ಮತ್ತೆ ಬ್ರಿಟನ್ ಗೆ ಮನವಿ ಮಾಡುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
-ಉದಯವಾಣಿ
Comments are closed.