ಜಿನಿವಾ (ಎಎಫ್‌ಪಿ): ನಿರಾಶ್ರಿತರ ಬಿಕ್ಕಟ್ಟು ತೀವ್ರ ಪ್ರಮಾಣದಲ್ಲಿ ಎದುರಾಗಿರುವುದರಿಂದ ಮುಂದಿನ ವರ್ಷದಲ್ಲಿ ತುರ್ತಾಗಿ 1.7 ಲಕ್ಷದಷ್ಟು ಜನರಿಗೆ ಪುರ್ನವಸತಿ ಕಲ್ಪಿಸಲು ವಿಶ್ವಸಂಸ್ಥೆಯು ತೀರ್ಮಾನಿಸಿದೆ.
ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ ನಿರಾಶ್ರಿತ ಸಂಖ್ಯೆಯಲ್ಲಿ ಮುಂದಿನ ವರ್ಷ 30 ಸಾವಿರದಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. 2017ರಲ್ಲಿ ಪುರ್ನವಸತಿ ಅಗತ್ಯವಿರುವ 11.9 ಲಕ್ಷ ನಿರಾಶ್ರಿತರ ಪೈಕಿ ಶೇ 15ರಷ್ಟು ಜನರಿಗೆ 2017ರ ಹೊತ್ತಿಗೆ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (ಯುಎನ್‌ಎಚ್‌ಸಿಆರ್) ಸೋಮವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ಸ್ವದೇಶಕ್ಕೆ ಹೋಗಲು ಸಾಧ್ಯವಾಗದವರು ಮತ್ತು ಆಶ್ರಯ ನೀಡಿರುವ ರಾಷ್ಟ್ರಗಳಲ್ಲಿ ಸೇರ್ಪಡೆಯಾಗದವರನ್ನು ನಿರಾಶ್ರಿತರ ಗುಂಪು ಒಳಗೊಂಡಿದೆ. ಆದರೆ 11.9 ಲಕ್ಷದಷ್ಟಿರುವ ಜನರಿಗೆ ಕೇವಲ 12 ತಿಂಗಳ ಅವಧಿಯಲ್ಲಿ ಪುರ್ನವಸತಿ ಕಲ್ಪಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಎಂದು ನಿರಾಶ್ರಿತರ ಹೈಕಮಿಷರ್ ಕಚೇರಿ ವಕ್ತಾರ ಲಿಯೊ ಡೊಬ್ಸ್ ತಿಳಿಸಿದ್ದಾರೆ.
ಈ ಕಾರಣ ತುರ್ತು ಪುರ್ನವಸತಿ ಅಗತ್ಯವಿರುವ 1.7 ಲಕ್ಷ ಜನರನ್ನು ತೃತೀಯ ರಾಷ್ಟ್ರಗಳಿಗೆ ವರ್ಗಾಯಿಸುವಂತೆ ಶಿಫಾರಸು ಮಾಡಲು ವಿಶ್ವಸಂಸ್ಥೆ ಚಿಂತನೆ ನಡೆಸುತ್ತಿದೆ.
ಆದರೆ, ಅಂತಿಮ ನಿರ್ಧಾರವನ್ನು ಆತಿಥೇಯ ರಾಷ್ಟ್ರಗಳಿಗೆ ಬಿಡಲಾಗುವುದು ಎಂದು ಅವರು ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಶಿಫಾರಸುಗಳಿಂದ ನಿರಾಶ್ರಿತರು ಹೊಸ ನೆಲೆ ಕಂಡುಕೊಂಡಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
ನಿರಾಶ್ರಿತರ ಹೈಕಮಿಷನ್ ನೀಡಿದ ಅಂಕಿ ಅಂಶದ ಪ್ರಕಾರ 2015ರಲ್ಲಿ 1.34 ಲಕ್ಷ ಹಾಗೂ 2014ರಲ್ಲಿ 1.4 ಲಕ್ಷ ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ.
Comments are closed.