ಮನೋರಂಜನೆ

ನಟಿಯಾಗಬೇಕೆಂಬ ಕನಸು ಹೊತ್ತು ಬಂದ ಈಕೆ ಕೊನೆಗೆ ಆದದ್ದು ಮಾತ್ರ ಭಿಕ್ಷುಕಿ ! ಈ ನಟಿಯ ಭಯಾನಕ ಕಥೆ ಇಲ್ಲಿದೆ ಓದಿ…

Pinterest LinkedIn Tumblr

sharma

ಮುಂಬೈ: ಕನಸುಗಳ ನಗರ ಮುಂಬೈ. ಸಾಧನೆ ಮಾಡುವೆನೆಂಬ ಛಲ ಹೊತ್ತು ಕನಸುಗಳ ಮೂಟೆಯನ್ನು ಹೇರಿ ಮುಂಬೈ ನಗರಕ್ಕೆ ಕಾಲಿಡುವ ಮಂದಿ ಇಲ್ಲಿ ತಮ್ಮ ಕನಸುಗಳನ್ನು ನನಸು ಮಾಡಲು ಒದ್ದಾಡುತ್ತಿರುತ್ತಾರೆ. ಹಾಗೆ ಕನಸುಗಳ ಜೋಳಿಗೆಯನು ಹೊತ್ತು ನಟಿಯಾಗಬೇಕೆಂಬ ಬಯಕೆಯಿಂದ ಮಿಥಾಲಿ ಶರ್ಮಾ ಎಂಬ ಯುವತಿ ಮುಂಬೈ ನಗರಕ್ಕೆ ಕಾಲಿಟ್ಟಳು. ನಟಿಯಾಗಬೇಕೆಂಬ ಬಯಕೆಯನ್ನು ಮನೆಯವರಲ್ಲಿ ಹೇಳಿದ ಕೂಡಲೇ ಅವರು ಈಕೆಯ ಕೈ ಬಿಟ್ಟು ಬಿಟ್ಟರು. ಹಾಗೆ ಕುಟುಂಬದವರ ಸಹಾಯವಿಲ್ಲದೆ ಆಕೆ ಮುಂಬೈ ಮಹಾನಗರದ ತೆಕ್ಕೆಗೆ ಬಿದ್ದು ಬಿಟ್ಟಳು.

ಮುಂಬೈಯಲ್ಲಿ ಆಕೆಯ ಹೋರಾಟ ಆರಂಭವಾಯಿತು. ಕೆಲವು ಭೋಜ್‌ಪುರಿ ಚಿತ್ರಗಳಲ್ಲಿ ನಟಿಸಿ, ಮಾಡೆಲಿಂಗ್ ಲೋಕಕ್ಕೂ ಕಾಲಿಟ್ಟಳು.

ಆದರೆ ಅಲ್ಲಿನ ಪೈಪೋಟಿಯಲ್ಲಿ ಮಿಥಾಲಿ ಸೋತು ಹೋದಳು. ಕ್ರಮೇಣ ಖಿನ್ನತೆ ಆವರಿಸಿತು. ಕೈಯಲ್ಲಿದ್ದ ದುಡ್ಡು ಖಾಲಿಯಾಗುತ್ತಿದ್ದಂತೆ ಆಕೆ ಭಿಕ್ಷೆ ಬೇಡಲು ಆರಂಭಿಸಿದಳು. ಭಿಕ್ಷಾಟನೆಯೂ ಹೊಟ್ಟೆ ತುಂಬಿಸದೇ ಇದ್ದಾಗ ಚಿಕ್ಕ ಪುಟ್ಟ ಕಳ್ಳತನಗಳನ್ನೂ ಮಾಡಿದಳು.

ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ ವಾಹನಗಳ ಗಾಜು ಪುಡಿ ಮಾಡಿ ಈಕೆ ಕಳ್ಳತನ ಮಾಡುತ್ತಿದ್ದಳು. ಹೀಗೆ ಎರಡು ದಿನಗಳ ಹಿಂದೆ ಮುಂಬೈನ ಲೋಖಂಡ್‌ವಾಲಾ ರಸ್ತೆಯಲ್ಲಿ ಕಳ್ಳತನ ಮಾಡುತ್ತಿದ್ದಾಗ ಒಶಿವಾರ ಪೊಲೀಸರ ಕೈಗೆ ಈಕೆ ಸಿಕ್ಕಿ ಬಿದ್ದಿದ್ದಾಳೆ.

ಮಿಥಾಲಿ ಖಿನ್ನತೆಯಿಂದ ಬಳಲುತ್ತಿದ್ದು ಎರಡು ದಿನಗಳಿಂದ ಈಕೆ ಏನನ್ನೂ ತಿಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈಕೆಯ ಮನೆಯವರನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದು, ಇಲ್ಲಿಯವರೆಗೆ ಯಾರೂ ಸಿಕ್ಕಿಲ್ಲ.

ಮಾನಸಿಕ ಅಸಮತೋಲನದಿಂದ ಬಳಲುತ್ತಿರುವ ಈಕೆಯನ್ನೀಗ ಥಾಣೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 2007ರಲ್ಲಿ ಗೀತಾಂಜಲಿ ಎಂಬ ಖ್ಯಾತ ರೂಪದರ್ಶಿಯೊಬ್ಬಳ ಬದುಕು ಕೂಡಾ ಇದೇ ರೀತಿ ಬೀದಿಪಾಲಾಗಿತ್ತು.

Write A Comment