ಮನೋರಂಜನೆ

ಆತ್ಮಹತ್ಯೆಗೆ ಶರಣಾದ ನಟಿ ಪ್ರತ್ಯೂಷಳ ಕೆಲವೊಂದು ವಿಷಯಗಳನ್ನು ಬಹಿರಂಗ ಪಡಿಸಿದ ಮನೆ ಕೆಲಸದಾಕೆ

Pinterest LinkedIn Tumblr

Pratyusha-Banerjeek

ಮುಂಬೈ: ಆತ್ಮಹತ್ಯೆಗೆ ಶರಣಾದ ಬಾಲಿಕಾವಧು ನಟಿ ಪ್ರತ್ಯೂಷ ಬ್ಯಾನರ್ಜಿ ಜೀವನದ ಬಗ್ಗೆ ಆಕೆಯ ಮನೆಯ ಕೆಲಸದಾಕೆ ಕೆಲವೊಂದು ವಿಷಯಗಳನ್ನು ಬಹಿರಂಗ ಪಡಿಸಿದ್ದಾಳೆ.

ಸುದ್ದಿ ಮಾಧ್ಯಮವೊಂದರ ವರದಿ ಪ್ರಕಾರ ಈ ಕೆಲಸದಾಕೆಪ್ರತ್ಯೂಷಳ ಖಾಂದೀವಲಿಯಲ್ಲಿರುವ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದು, ಆಮೇಲೆ ಗುರ್‌ಗಾಂವ್‌ನಲ್ಲಿ ಮನೆಗೂ ಶಿಫ್ಟ್ ಆಗಿದ್ದಳು. ಪ್ರತ್ಯೂಷ ಮನೆಯಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಾಗ ಮಾರ್ಚ್ 20ರಂದು ಮನೆಕೆಲಸದಾಕೆ ಆ ಕೆಲಸವನ್ನು ಬಿಟ್ಟಿದ್ದಳು.

ರಾಹುಲ್ ಜತೆಗಿನ ಸಂಬಂಧವನ್ನು ಮುರಿಯುವಂತೆ ಪ್ರತ್ಯೂಷ ಅಮ್ಮ ಹೇಳುತ್ತಲೇ ಇದ್ದರೂ 24 ರ ಹರೆಯದ ಪ್ರತ್ಯೂಷ ರಾಹುಲ್‌ಗಾಗಿ ಅಮ್ಮನ ಜತೆ ವಾದಿಸುತ್ತಿದ್ದಳು. ನಿನ್ನ ಅಪ್ಪ ಅಮ್ಮನೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಡ ಎಂದು ರಾಹುಲ್ ಪ್ರತ್ಯೂಷಳಿಗೆ ಹೇಳಿದ್ದ. ಅಷ್ಟೇ ಅಲ್ಲ, ರಾಹುಲ್‌ಗಾಗಿ ಖರ್ಚು ಮಾಡುವ ಬದಲು ಆ ಹಣವನ್ನು ನಿಮ್ಮ ಅಪ್ಪ ಅಮ್ಮನಿಗೆ ಕೊಡಿ ಎಂದು ನಾನೇ ಪ್ರತ್ಯೂಷಳಿಗೆ ಉಪದೇಶಿಸಿದ್ದೆ ಎಂದು ಕೆಲಸದಾಕೆ ಹೇಳಿದ್ದಾಳೆ.

ಆದರೆ ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದ ಪ್ರತ್ಯೂಷ, ಆಕೆಯ ಅಮ್ಮನಲ್ಲೇ ಮನೆ ಬಿಟ್ಟು ಹೋಗುವಂತೆ ಹೇಳಿದ್ದಳು. ಇದಾದನಂತರ ರಾಹುಲ್ ಆಕೆಯ ಫೋನ್‌ನಲ್ಲಿ ಆಕೆಯ ಹೆತ್ತವರ ನಂಬರ್‌ನ್ನು ಬ್ಲಾಕ್ ಮಾಡಿದ್ದ!

ಪ್ರತ್ಯೂಷಳ ಹೆಚ್ಚಿನ ಗೆಳತಿಯರಿಗೆ ಮದುವೆಯಾಗಿದ್ದ ಕಾರಣ, ತಾನೂ ಬೇಗ ಮದುವೆಯಾಗಬೇಕು ಎಂದು ಪ್ರತ್ಯೂಷ ಬಯಸಿದ್ದಳು. ಆಕೆ ತುಂಬಾ ಲವಲವಿಕೆಯ ಹುಡುಗಿಯಾಗಿದ್ದು, ಫ್ರೆಂಡ್ಸ್ ಜತೆ ಬೆರೆಯುತ್ತಿದ್ದಳು. ಅವಳ ಈ ಸ್ವಭಾವವೇ ರಾಹುಲ್‌ಗೆ ಭಯ ಹುಟ್ಟಿಸುತ್ತಿತ್ತು. ಪ್ರತ್ಯೂಷ ಆಕೆಯ ಹಳೆ ಬಾಯ್‌ಫ್ರೆಂಡ್‌ನ್ನು ಭೇಟಿ ಮಾಡಿದರೆ? ಎಂಬ ಭಯ ರಾಹುಲ್‌ಗೆ ಇತ್ತು.

ಪ್ರತ್ಯೂಷ ಶ್ರೀಲಂಕಾದಲ್ಲಿದ್ದಾಗ ರಾಹುಲ್ ಆಕೆಗೆ ಫೋನ್ ಮಾಡಿ ಬೈಯ್ದಿದ್ದ. ನೀನು ಹಳೆಯ ಬಾಯ್‌ಫ್ರೆಂಡ್‌ನ್ನು ಭೇಟಿ ಮಾಡಲು ಹೋಗಿದ್ದಿ ಎಂದು ಆರೋಪಿಸಿ ರಾಹುಲ್ ಆಕೆಯನ್ನು ಕೆಟ್ಟದಾಗಿ ಬೈದಿದ್ದನು. ಪ್ರತ್ಯೂಷ ಅಳುತ್ತಾ ಕೂತಿದ್ದಳು. ಆಕೆ ರಾಹುಲ್‌ನ್ನು ಮನಸಾರೆ ಪ್ರೀತಿಸುತ್ತಿದ್ದರೆ, ರಾಹುಲ್ ಮಾತ್ರ ಮೋಸ ಮಾಡುತ್ತಿದ್ದ.

ಪ್ರತ್ಯೂಷ ಗುರ್‌ಗಾಂವ್‌ಗೆ ಮನೆ ಶಿಫ್ಟ್ ಮಾಡಿದಾಗ ಆಕೆಯ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ನನ್ನಿಂದಲೇ ಆಕೆ ಆರೇಳು ಬಾರಿ ಸಾಲ ಪಡೆದದ್ದೂ ಇದೆ. ಆರ್ಥಿಕ ಸ್ಥಿತಿ ಹದಗೆಟ್ಟಾಗ ಆಕೆ ಮದ್ಯ ಸೇವನೆಯನ್ನೂ ಆರಂಭಿಸಿದಳು.

ಕಳೆದ ಮೂರು ವರ್ಷಗಳಲ್ಲಿ ಆಕೆಯ ಬಳಿ ಯಾವುದೇ ದೊಡ್ಡ ಪ್ರಾಜೆಕ್ಟ್‌ಗಳು ಇರಲಿಲ್ಲ. ಆದರೆ ಆಕೆಯಲ್ಲಿದ್ದ ಹಣವನ್ನೆಲ್ಲಾ ರಾಹುಲ್ ದೋಚುತ್ತಿದ್ದ. ಕಿರುತೆರೆ ರಂಗದಿಂದ ಬಸವಳಿದಿದ್ದ ಆಕೆ ಟ್ರಾವೆಲ್ ಏಜೆನ್ಸಿಯೊಂದನ್ನು ಆರಂಭಿಸಲು ಆಕೆ ನಿರ್ಧರಿಸಿದ್ದಳು, ಅದಕ್ಕಾಗಿ ಆಕೆಗೆ ರು. 4 ಲಕ್ಷದ ಅವಶ್ಯಕತೆ ಇತ್ತು.ಏತನ್ಮಧ್ಯೆ, ಮದುವೆಯಾಗಲು ರಾಹುಲ್ ನಿರಾಕರಿಸಿರುವ ಕಾರಣವೇ ಪ್ರತ್ಯೂಷ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕೆಲಸದಾಕೆ ಹೇಳಿದ್ದಾಳೆ.

Write A Comment