ಮುಂಬೈ

ಮುಂಬೈ ದಾಳಿಯಲ್ಲಿ ಸಾವಿರಾರು ಜನರ ಪ್ರಾಣ ಉಳಿಸಿದ ನಾಯಿ ಸಾವು; ತ್ರಿವರ್ಣ ಧ್ವಜ ಹೊದಿಸಿ ಗೌರವ ಸಲ್ಲಿಕೆ

Pinterest LinkedIn Tumblr

dog

ಮುಂಬೈ: ಮುಂಬೈ ದಾಳಿಯ ಸಂದರ್ಭದಲ್ಲಿ ಸಾವಿರಾರು ಜನರ ಪ್ರಾಣ ಉಳಿಸಲು ಸೇನೆಗೆ ನೆರವಾಗಿದ್ದ ಪೊಲೀಸ್ ನಾಯಿ ಮ್ಯಾಕ್ಸ್ ಶುಕ್ರವಾರ ಮೃತಪಟ್ಟಿದೆ. ನಾಯಿಯ ದೇಹಕ್ಕೆ ತ್ರಿವರ್ಣ ಧ್ವಜವನ್ನು ಹೊದಿಸಿ ಗೌರವ ಸಲ್ಲಿಸಿ ಪೊಲೀಸರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಆದರೆ ಈ ಸಾಹಸಿ ನಾಯಿಯ ಅಂತ್ಯಸಂಸ್ಕಾರಕ್ಕೆ ಪೊಲೀಸ್ ಅಧಿಕಾರಿಗಳು ಗೈರಾಗಿದ್ದರು. ಕೆಲವು ದಿನಗಳಿಂದ ಖಾಯಿಲೆಯಿಂದ ಬಳಲುತ್ತಿದ್ದ ನಾಯಿ ವಿರಾರ್ ವೃದ್ಧಾಶ್ರಮದಲ್ಲಿ ಮೃತಪಟ್ಟಿದ್ದು, ನಾಯಿಗೆ ಪಾಲಕರಾದ ಫಿಝಾ ಷಾ ಮತ್ತು ಸುಭಾಷ್ ಗಾವ್ಡೆ ಸೇರಿದಂತೆ ವೃದ್ಧಾಶ್ರಮದ ಕೆಲವು ಸಿಬ್ಬಂದಿಗಳು ಮಾತ್ರ ಅಂತಿಮ ವಿದಾಯ ಹೇಳಿದರು.

2008ರ ನವೆಂಬರ್ 26ರಂದು ತಾಜ್ ಹೋಟೆಲ್‍ನಲ್ಲಿ ನಡೆದ ಉಗ್ರರ ದಾಳಿಯ ಸಂದರ್ಭದಲ್ಲಿ 8 ಕೆಜಿ ತೂಕದ ಆರ್‍ಡಿಎಕ್ಸ್ ಬಾಂಬನ್ನು ಈ ನಾಯಿ ಪತ್ತೆಹಚ್ಚಿತ್ತು. ಇದಲ್ಲದೆ ಹೋಟೆಲ್‍ನ ಮುಖ್ಯದ್ವಾರದ ಬಳಿ 25 ಗ್ರೆನೇಡ್‍ಗಳನ್ನ ಪತ್ತೆಹಚ್ಚಿತ್ತು. 2004ರಲ್ಲಿ ಜನಿಸಿದ ಈ ಲ್ಯಾಬ್‍ರೇಡರ್ ಜಾತಿಯ ನಾಯಿ ಮ್ಯಾಕ್ಸ್ ಮುಂಬೈ ದಾಳಿ ಸಂದರ್ಭದಲ್ಲಿ ಇನ್ನೂ ಪುಟ್ಟ ಮರಿಯಾಗಿತ್ತು.

ಮುಂಬೈ ದಾಳಿಯ ಸಂದರ್ಭದಲ್ಲಿ ನಾಯಿಯ ಈ ಸಾಹಸವನ್ನು ಮೆಚ್ಚಿ ಚಿನ್ನದ ಪದಕವನ್ನು ನೀಡಲಾಗಿತ್ತು. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮ್ಯಾಕ್ಸ್‍ಗೆ ಚಿನ್ನದ ಪದಕ ತೊಡಿಸಿದ್ದರು.

ಐಪಿಎಲ್ ಬಂದೋಬಸ್ತ್‍ನಲ್ಲಿ ಬ್ಯುಸಿಯಾಗಿರುವ ಕಾರಣ ಮ್ಯಾಕ್ಸ್‍ನ ಅಂತ್ಯಸಂಸ್ಕಾರಕ್ಕೆ ಪೊಲೀಸ್ ಅಧಿಕಾರಿಗಳು ಬರಲಾಗಲಿಲ್ಲ. ಮ್ಯಾಕ್ಸ್‍ನ ಪಾಲಕರು ನಮ್ಮೆಲ್ಲರ ಪರವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಅಂತ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿ ಸಲೀಮ್ ಭಗವಾನ್ ಹೇಳಿದ್ದಾರೆ.

Write A Comment