ಮುಂಬೈ: ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಡಳಿತ ಹೇರಿರುವ ಬಿಜೆಪಿ ಸರ್ಕಾರದ ಕ್ರಮವನ್ನು ಶಿವಸೇನಾ ಖಂಡಿಸಿದೆ. ಬಿಜೆಪಿಯಿಂದ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಯತ್ನ ನಡೆಯುತ್ತಿದೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹೇಳಿದೆ.
ನೈತಿಕತೆ ಹೆಸರಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಇದೇ ರೀತಿ ಬಿಜೆಪಿ ತನ್ನ ಉದ್ಧಟತನ ಮುಂದುವರೆಸಿದರೆ, ದೇಶದಲ್ಲಿ ಅಸ್ಥಿರತೆ ಮತ್ತು ಅರಾಜಕತೆ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಶಿವಸೇನಾ ಕಿಡಿಕಾರಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ತಾತ್ಕಾಲಿಕ ಹಾಗೂ ಕಡ್ಡಾಯ ರಾಜಕೀಯಕ್ಕಾಗಿ. ಇದರಲ್ಲಿ ನೈತಿಕತೆ ಅಥವಾ ಅನೈತಿಕತೆ ಎಂಬ ಪ್ರಶ್ನೆಯೇ ಇಲ್ಲ ಎಂದು ಶಿವಸೇನಾ ಹೇಳಿದೆ.
ಉತ್ತರಾಖಂಡ್ ನಲ್ಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ, ಕಾಂಗ್ರೆಸ್ ನ 9 ಭಿನ್ನಮತಿಯರ ಶಾಸಕರನ್ನು ಬಳಸಿಕೊಂಡಿದೆ ಎಂದು ಶಿವಸೇನಾ ತನ್ನ ಸಾಮ್ನಾ ಪತ್ರಿಕೆಯ ಮುಖವಾಣಿಯಲ್ಲಿ ಹೇಳಿಕೊಂಡಿದೆ.