ಮುಂಬೈ

ವಿಚಾರಣೆಗೆ ಹಾಜರಾಗಲು ಏಪ್ರಿಲ್ ವರೆಗೆ ಕಾಲಾವಕಾಶ ಕೇಳಿದ ವಿಜಯ್ ಮಲ್ಯ

Pinterest LinkedIn Tumblr

07-vijay-mallya

ಮುಂಬೈ: ಭಾರತೀಯ ಬ್ಯಾಂಕ್ ಗಳಿಗೆ ಬೇಕಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಜಾರಿ ನಿರ್ದೇಶನಾಲಯ(ಇಡಿ)ದ ಮುಂದೆ ವಿಚಾರಣೆಗೆ ಹಾಜರಾಗಲು ಏಪ್ರಿಲ್ ವರೆಗೆ ಕಾಲಾವಕಾಶ ಕೇಳಿದ್ದಾರೆ.

ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ಅವರಿಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಇಡಿ ಮಾರ್ಚ್ 18ರಂದು ನೋಟಿಸ್ ಜಾರಿ ಮಾಡಿತ್ತು. ಆದರೆ ನಾಳೆ ಮುಂಬೈಗೆ ಬರಲು ನಿರಾಕರಿಸಿರುವ ಮಲ್ಯ, ಏಪ್ರಿಲ್ ವರೆಗೆ ಕಾಲಾವಕಾಶ ನೀಡಿ, ಮುಂದಿನ ತಿಂಗಳು ವಿಚಾರಣೆಗೆ ಹಾಜರಾಗುವುದಾಗಿ ಇಡಿಗೆ ಪತ್ರ ಬರೆದಿದ್ದಾರೆ.

ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಮಲ್ಯ, ನಾನು ಎಲ್ಲೂ ಪರಾರಿಯಾಗಿಲ್ಲ. ರಾಜ್ಯಸಭಾ ಸದಸ್ಯನಾಗಿದ್ದು, ದೇಶದ ಕಾನೂನನ್ನು ಪಾಲಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಸದ್ಯ ತಾವು ಇರುವ ಸ್ಥಳವನ್ನು ಮಾತ್ರ ಬಹಿರಂಗಪಡಿಸಿರಲಿಲ್ಲ.

ಮಲ್ಯ ಅವರ ಪಾಸ್ ಪೋರ್ಟ್ ಅನ್ನು ಅಮಾನತುಗೊಳಿಸಿ, ವಿದೇಶಕ್ಕೆ ಹೋಗದಂತೆ ತಡೆಯಬೇಕು ಎಂದು ಬ್ಯಾಂಕ್ ಗಳು ಸುಪ್ರೀಂ ಕೋರ್ಟ್ ಹೋಗಿದ್ದವು. ಆದರೆ ಅಷ್ಟೊತ್ತಿಗಾಗಲೇ ವಿದೇಶಕ್ಕೆ ಹಾರಿದ್ದ ಮದ್ಯದ ದೊರೆ, ಲಂಡನ್ ನಲ್ಲಿ ಪ್ರತ್ಯಕ್ಷವಾಗಿದ್ದರು.

Write A Comment