ಮುಂಬೈ

ಭಾರತೀಯ ಜರ್ಸಿಯಿಂದ ಕ್ಯಾಪ್ಟನ್ ಕೂಲ್ ಧೋನಿ ಮಿಸ್ : ವಿವಾದಕ್ಕೆಡೆ ಮಾಡಿದ ಹೋರ್ಡಿಂಗ್ಸ್

Pinterest LinkedIn Tumblr

dhoniಮುಂಬೈ, ಮಾ. 13- ಮುಂಬರುವ ಚುಟುಕು ವಿಶ್ವಕಪ್‌ನ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರುವ ಹೋರ್ಡಿಂಗ್ಸ್ ಹಾಗೂ ಜಾಹೀರಾತುಗಳು ವಿವಾದಕ್ಕೆಡೆ ಮಾಡಿದೆ. ಚುಟುಕು ಕ್ರಿಕೆಟ್ ರಂಗದ ಮತ್ತನ್ನು ಏರಿಸಲು ಹೊರ ತಂದಿರುವ ಜಾಹೀರಾತಿನಲ್ಲಿ ಆಯಾ ದೇಶದ ಶ್ರೇಷ್ಠ ಆಟಗಾರರ ಫೋಟೋಗಳನ್ನು ಬಳಸಲಾಗಿದ್ದು ಇದರಲ್ಲಿ ಅತಿಥೇಯ ಭಾರತ ತಂಡದ ಪರವಾಗಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಫೋಟೋವನ್ನು ಬಳಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ವಿಶ್ವಕಪ್‌ನ ಹೋರ್ಡಿಂಗ್ಸ್ ಹಾಗೂ ಜಾಹೀರಾತಿನಲ್ಲಿ ಬಳಸಿರುವ ಮಹೇಂದ್ರಸಿಂಗ್ ಧೋನಿಯ ಫೋಟೋಗಳಲ್ಲಿ ಭಾರತ ತಂಡದ ಈಗಿನ ಜೆರ್ಸಿಯನ್ನು ಬಳಸದಿರುವುದು ಹಾಗೂ ಅವರ ಮುಖ ಸ್ಪಷ್ಟವಾಗಿ ಗೋಚರಿಸದಿರುವುದು ವಿವಾದಕ್ಕೆ ಎಡೆ ಮಾಡಿದೆ. ಈ ಹೋರ್ಡಿಂಗ್ಸ್‌ನಲ್ಲಿ ನ್ಯೂಜಿಲ್ಯಾಂಡ್‌ನ ಕೋರೆ ಅಂಡರ್ಸನ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ , ಇಂಗ್ಲೆಂಡ್‌ನ ಜೋಸ್ ಬಟ್ಲರ್, ಶ್ರೀಲಂಕಾದ ಆಂಜಲೋ ಮ್ಯಾಥ್ಯೂಸ್‌ರ ಫೋಟೋಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು ಧೋನಿಯ ಮುಖ ಅಸ್ಪಷ್ಟವಾಗಿ ಗೋಚರಿಸಿದೆ.

ಅಲ್ಲದೆ ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ಗೇಲ್ ಹಾಗೂ ಪಾಕಿಸ್ತಾನದ ಯಾವೊಬ್ಬ ಆಟಗಾರನ ಭಾವಚಿತ್ರವನ್ನು ಈ ಹೋರ್ಡಿಂಗ್ಸ್ ಮತ್ತು ಜಾಹೀರಾತಿನಲ್ಲಿ ಬಳಸದಿರುವುದು ಕೂಡ ವಿವಾದಕ್ಕೆಡೆ ಮಾಡಿದೆ. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಟ್ವೆಂಟಿ-20 ವಿಶ್ವಕಪ್‌ನ ನಿರ್ವಹಣಾ ಸಮಿತಿಯ ಮುಖ್ಯಸ್ಥ ಈ ಜಾಹೀರಾತನ್ನು ರೂಪಿಸಲು ಶ್ರೇಷ್ಠ ಕಲಾವಿನ್ಯಾಸಕರ ತಂಡವನ್ನೇ ಆಯ್ಕೆ ಮಾಡಿದ್ದೆವು. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಈ ಎಡವಟ್ಟಾಗಿರುವುದು ನಮ್ಮ ಗಮನಕ್ಕೂ ಬಂದಿದ್ದು ಇದರ ದೋಷವನ್ನು ಸರಿಪಡಿಸಿ ನವನವೀನ ಜಾಹೀರಾತನ್ನು ವಿಶ್ವಕಪ್‌ನ ಆರಂಭಕ್ಕೂ ಮುನ್ನವೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

Write A Comment