ಕರ್ನಾಟಕ

ಖಡಕ್ ಅಧಿಕಾರಿ ಡಿಕೆ ರವಿ ವಾರ್ಷಿಕ ಪುಣ್ಯತಿಥಿ : ಕಂಬನಿ ಮಿಡಿದ ಅಭಿಮಾನಿ ವೃಂದ

Pinterest LinkedIn Tumblr

raviಕುಣಿಗಲ್, ಮಾ.13- ಕಳೆದ ವರ್ಷವಷ್ಟೆ ಸಾವನ್ನಪ್ಪಿದ್ದ ದಕ್ಷ ಅಧಿಕಾರಿ ಡಿ.ಕೆ.ರವಿ ಅವರ ವಾರ್ಷಿಕ ಪುಣ್ಯತಿಥಿಯನ್ನು ಕುಟುಂಬಸ್ಥರು ನೆರವೇರಿಸಿದರು. ರವಿ ಅವರ ಹುಟ್ಟೂರಾದ ಹುಲಿಯೂರುದುರ್ಗ ಹೋಬಳಿ, ದೊಡ್ಡಕೊಪ್ಪಲು ಗ್ರಾಮದಲ್ಲಿ ನಡೆದ ಪುಣ್ಯತಿಥಿ ಕಾರ್ಯದಲ್ಲಿ ಸುಮಾರು 12 ಗಂಟೆಗೆ ಕುಟುಂಬದವರು ವಂಶಸ್ಥರ ವಿಧಿ-ವಿಧಾನದಂತೆ ರವಿಯವರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದರು. ನಂತರ ಮನೆಯಲ್ಲಿ ಮನೆ ದೇವರಿಗೆ ಪೂಜೆ ಮಾಡಿ ತಿಥಿ ಕಾರ್ಯಕ್ಕೆ ಆಗಮಿಸಿದ ಸುಮಾರು 1500 ಜನರಿಗೆ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ರವಿ ಅವರ ಈ ವಾರ್ಷಿಕ ಪುಣ್ಯತಿಥಿಗೆ ಕೋಲಾರದಿಂದ ಅಬಿಮಾನಿಗಳ ದಂಡು ಬಸ್, ಟೆಂಪೊ, ದ್ವಿಚಕ್ರ ವಾಹನ ಹಾಗೂ ಇತರೆ ವಾಹನಗಳಲ್ಲಿ ಬಂದು ರವಿ ಅವರ ಸಮಾಧಿ ಬಳಿ ರೋಧಿಸುತ್ತಿದ್ದ ದೃಶ್ಯ ಕುಟುಂಬಸ್ಥರು ಮತ್ತು ಸಂಬಂಧಿಕರ ದುಃಖವನ್ನು ಮತ್ತಷ್ಟು ಹೆಚ್ಚು ಮಾಡಿತು.ತಾಯಿ ಗೌರಮ್ಮ ಅಂತೂ ಸಂಪೂರ್ಣ ನಿಶ್ಯಕ್ತರಾಗಿದ್ದು, ಒಂದು ವರ್ಷದಿಂದಲೂ ಪುತ್ರಶೋಕದಿಂದ ಹೊರಬರಲು ಸಾಧ್ಯವಾಗದೆ ಜೀವಂತ ಶವವಾಗಿ ಬದುಕುತ್ತಿರುವ ದೃಶ್ಯ ಯಾವುದೇ ತಾಯಿಗೂ ಕೂಡ ಬರಬಾರದು ಎಂದು ಜನರು ಭಗವಂತನಲ್ಲಿ ಮೊರೆಯಿಡುತ್ತ ಕಣ್ಣೀರಿಡುತ್ತಿದ್ದರು.

ದಕ್ಷ, ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿ ಅವರ ವರ್ಷದ ಪುಣ್ಯತಿಥಿ ಕಾರ್ಯ ಮಾಡಲು ಹಣವಿಲ್ಲದೆ ಪರಿತಪಿಸುತ್ತಿರುವ ಕುಟುಂಬಕ್ಕೆ ಸ್ಥಳೀಯರಾಗಲಿ, ಜನಪ್ರತಿನಿಧಿಗಳಾಗಲಿ, ಉದ್ಯಮಿಗಳಾಗಲಿ, ಸಾಮಾಜಿಕ ಕಳಕಳಿಯುಳ್ಳ ಯಾವುದೇ ಸಂಘ-ಸಂಸ್ಥೆಗಳಾಗಲಿ ಸಹಾಯಹಸ್ತ ಮಾಡುವ ಮನಸ್ಸು ಮಾಡದೆ ಇದ್ದದ್ದು ದೌರ್ಭಾಗ್ಯ.ಆದರೆ, ಗೌರಮ್ಮ ಅಣ್ಣ ರಮೇಶ್ ತಮ್ಮ ಸಂಬಂಧಿಕರ ಬಳಿ ಸಾಲ ಮಾಡಿ ಅವರೇ ಕಾರ್ಯನಿರ್ವಹಿಸಿದರು.

ಆದರೆ, ತಾಯಿ ಗೌರಮ್ಮ ಅಧಿಕಾರಿಗಳ ಬಳಿ ಬಂದು ನನ್ನ ಮಗ ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಆತ ಉದ್ಯೋಗದಲ್ಲಿದ್ದಾಗ ಒಂದು ಪೈಸೆ ಹಣವನ್ನೂ ಕೂಡ ಸಂಪಾದನೆ ಮಾಡದೆ ನಮ್ಮ ಕುಟುಂಬ ಕಷ್ಟದಲ್ಲೇ ಬದುಕುವಂತಾಗಿದೆ. ಅಲ್ಲದೆ, ನನ್ನ ಮೊಮ್ಮಗ-ಮೊಮ್ಮಗಳ ವಿದ್ಯಾಭ್ಯಾಸ ಮಾಡಿಸಬೇಕು, ನಮ್ಮ ಆರ್ಥಿಕ ಪರಿಸ್ಥಿತಿ ಬಹಳ ಕಷ್ಟದಲ್ಲಿದೆ. ಆದ್ದರಿಂದ ರವಿ ಅವರಿಗೆ ಸರ್ಕಾರದಿಂದ ಬರಬೇಕಾದ ಹಣವನ್ನು ನೀಡುವಂತೆ ಎಷ್ಟು ಬಾರಿ ಕಚೇರಿಗೆ ಅಲೆದಾಡಿದರೂ ಹಣ ದೊರೆತಿಲ್ಲ ಎಂದು ತಾಯಿ ಗೌರಮ್ಮ ಅಲವತ್ತುಕೊಂಡಿದ್ದಾರೆ.

ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಹಾಗಾಗಿ ಇದೇ 16ರಂದು ಡಿ.ಕೆ.ರವಿ ಸಮಾಧಿಗೆ ಪೂಜೆ ಸಲ್ಲಿಸಿ ಹುಲಿಯೂರುದುರ್ಗದವರೆಗೆ ಪಾದಯಾತ್ರೆ ಮಾಡಿ ಅಲ್ಲಿಂದ ಬೆಂಗಳೂರಿಗೆ ತೆರಳಿ ಮಹಾತ್ಮಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಆದ್ದರಿಂದ ಸರ್ಕಾರ ಪ್ರತ್ಯೇಕವಾಗಿ ಒಬ್ಬ ಪ್ರಾಮಾಣಿಕ ಅಧಿಕಾರಿಯ ಹೆಸರಿನಲ್ಲಿ ಫೌಂಡೇಷನ್ ಅಥವಾ ನಿಧಿ ಮುಂತಾದ ಹೆಸರಿನಲ್ಲಿ ಯೋಜನೆ ರೂಪಿಸಿ ರವಿಯಂತೆಯೇ ಆ ಕುಟುಂಬದಿಂದ ಮತ್ತೊಬ್ಬ ಅಧಿಕಾರಿ ಈ ರಾಜ್ಯಕ್ಕೆ ಬರಲಿ ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ಹೇಳಿದರು.

Write A Comment