ರಾಷ್ಟ್ರೀಯ

ಪ್ರಾಣ ಒತ್ತೆಯಿಟ್ಟು ಗಡಿ ಕಾಯುವ ಸೈನಿಕರಿಗಿಲ್ಲ ಗುಂಡು ನಿರೋಧಕ ಕವಚ..!

Pinterest LinkedIn Tumblr

miliನವದೆಹಲಿ, ಮಾ.13- ಪ್ರತಿವರ್ಷ ನಮ್ಮ ಸರ್ಕಾರಗಳು ರಕ್ಷಣಾ ವೆಚ್ಚಕ್ಕೆಂದು ಬಜೆಟ್‌ನಲ್ಲಿ ಲಕ್ಷಾಂತರ ಕೋಟಿ ರೂ.ಗಳನ್ನು ಮೀಸಲಿಡುತ್ತದೆ. ಆದರೆ, ದುರ್ದೈವ ನೋಡಿ… ಗಡಿಯಲ್ಲಿ ದೇಶ ಕಾಯುತ್ತಿರುವ ನಮ್ಮ ಯೋಧರಿಗೆ ಧರಿಸಲು ಬುಲೆಟ್ ಪ್ರುಫ್ (ಗುಂಡು ನಿರೋಧಕ) ಜಾಕೆಟ್‌ಗಳಿಲ್ಲ! ತುರ್ತಾಗಿ 50 ಸಾವಿರ ಗುಂಡು ನಿರೋಧಕ ಜಾಕೆಟ್ ಖರೀದಿಸಲು 120 ಕೋಟಿ ರೂ. ಸಿಕ್ಕೇ ಇಲ್ಲ. ಕಳೆದ 5 ತಿಂಗಳಿಂದ ಪ್ರಸ್ತಾವನೆ ಹಾಗೇ ಬಿದ್ದಿದೆ. ಗಡಿಯಲ್ಲಿ ಯೋಧರು ಮಾತ್ರ ಭಾಗಶಃ ಹಳೆಯ ಗುಂಡು ನಿರೋಧಕ ಕವಚ ಧರಿಸಿಯೇ ಶತ್ರುಗಳ ಗುಂಡಿಗೆ ಬಲಿಯಾಗುತ್ತಿದ್ದಾರೆ.

ಕಳೆದ 2009ರಲ್ಲಿ ಸೇನೆಗೆ ಪೂರ್ಣ ಪ್ರಮಾಣದ ಗುಂಡು ನಿರೋಧಕ ಕವಚಗಳ ಅಗತ್ಯವಿದೆ ಎಂದು ಅಂದಾಜಿಸಲಾಯಿತು. ಆದರೆ, ಇನ್ನೂ ಅದು ಕಾರ್ಯಗತವಾಗಿಲ್ಲ. ಗುಂಡು ನಿರೋದಕ ಕವಚ ತಯಾರಿಕಾ ಕಂಪೆನಿಗಳ ಜತೆ ವ್ಯವಹಾರ ಕುದುರಿಸುವಲ್ಲಿ ರಕ್ಷಣಾ ಇಲಾಖೆ ಇನ್ನೂ ಚೌಕಾಶಿ ಮಾಡುತ್ತಲೇ ಕಾಲಹರಣ ಮಾಡುತ್ತಿದೆ. ಇಂತಹ ಪ್ರತಿ ಕವಚದ ಬೆಲೆ 25 ಸಾವಿರ ರೂ. ಆಗುತ್ತದೆ. ತುರ್ತಾಗಿ 50 ಸಾವಿರ ಖರೀದಿ ಅಗತ್ಯವಿದ್ದು, ಕಾನ್ಪುರ್ ಹಾಗೂ ಎಂಕೆಯು ಕಂಪೆನಿಗಳಿಗೆ ತಲಾ 25 ಸಾವಿರ ಗುಂಡು ನಿರೋಧಕ ಕವಚ ಉತ್ಪಾದನೆಗೆ ವಹಿಸಿಕೊಡಲು ವ್ಯವಹಾರ ಕುದುರಬೇಕಾಗಿದೆ. ಆ ಕೆಲಸ ಕಳೆದ ಐದು ತಿಂಗಳಿಂದಲೂ ಆಗಿಲ್ಲ. ಕಳೆದ ಡಿಸೆಂಬರ್‌ನಲ್ಲೇ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಅದು ಪ್ರಸ್ತಾಪವಾಗಿಯೇ ಉಳಿದಿದೆ.

ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಶಂಕರ್ ಪ್ರಸಾದ್ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ಅವರು ಹೇಳಿದ್ದು ಇನ್ನೂ ಅಚ್ಚರಿ ವಿಷಯ. 2001ರಲ್ಲಿಯೇ ನಿಮ್ಮಂತಹ ಪತ್ರಕರ್ತರೊಬ್ಬರು ನನ್ನ ಬಳಿ ಇದೇ ಪ್ರಶ್ನೆ ಕೇಳಿದ್ದರು. ಆಗಲೂ ಇದೇ ಪರಿಸ್ಥಿತಿ ಇತ್ತು. ನಂತರ ಎರಡು ವರ್ಷಗಳಲ್ಲಿ ನಿವೃತ್ತನಾದೆ. ನಿವೃತ್ತಿಯಾಗಿ 14 ವರ್ಷಗಳೇ ಕಳೆದಿವೆ. ನೂರಾರು ಜನ ಸೈನಿಕರು ಬಲಿಯಾಗಿದ್ದಾರೆ. ಆದರೆ, ಗುಂಡು ನಿರೋದಕ ಜಾಕೆಟ್(ಕವಚ) ಮಾತ್ರ ಸೈನಿಕರಿಗೆ ದೊರೆಯಲೇ ಇಲ್ಲ ಎನ್ನುತ್ತಾರೆ.

Write A Comment