
ಮುಂಬೈ (ಪಿಟಿಐ): ಇತ್ತೀಚೆಗೆ ಸಾಮಾಜಿಕ ಒಡಕು ಅಭಿವೃದ್ಧಿಗೆ ಮಾರಕವಾಗುತ್ತಿದೆ ಎಂದಿದ್ದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ‘ಉದ್ಯೋಗ ಕಳೆದುಕೊಳ್ಳಲು ಬಯಸಲ್ಲ’ ಎನ್ನುವ ಮೂಲಕ ಗೋಮಾಂಸ ನಿಷೇಧ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.
ಮುಂಬೈ ವಿಶ್ವವಿದ್ಯಾಲಯಲ್ಲಿ ವಿದ್ಯಾರ್ಥಿಗಳೊಟ್ಟಿನ ಸಂವಾದದ ವೇಳೆ ಸುಬ್ರಮಣಿಯನ್ ಅವರಿಗೆ ಗೋಮಾಂಸ ನಿಷೇಧ ನಡೆ ರೈತರ ಆದಾಯ ಅಥವಾ ಗ್ರಾಮೀಣ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆ ಕೇಳಲಾಗಿತ್ತು.
ಇದಕ್ಕೆ ಅವರು, ‘ನಿಮಗೆ ಗೊತ್ತಾ, ನಾನು ಈ ಪ್ರಶ್ನೆಗೆ ಉತ್ತರಿಸಿದರೆ, ನನ್ನ ಉದ್ಯೋಗ ಕಳೆದುಕೊಳ್ಳುತ್ತೇನೆ. ಆದರೆ, ಅದೇನೆ ಆದರೂ ಈ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು’ ಎಂದರು.
ಸುಬ್ರಮಣಿಯನ್ ಅವರ ಪ್ರತಿಕ್ರಿಯೆಗೆ ನೆರೆದಿದ್ದವರಿಂದ ಚಪ್ಪಾಳೆಯ ಸ್ಪಂದನೆ ದೊರೆಯಿತು.
‘ಸಾಮಾಜಿಕ ಒಡಕಿಗೆ ನೀವು ಹೇಗೆ ಸ್ಪಂದಿಸುತ್ತೀರಿ ಎಂಬುದು ಆರ್ಥಿಕ ಅಭಿವೃದ್ಧಿಯ ಮೇಲೆ ನಿರ್ಣಾಯಕ ಪ್ರಭಾವ ಬೀರುತ್ತದೆ’ ಎಂದು ಇತ್ತೀಚೆಗೆ ಬೆಂಗಳೂರಿನಲ್ಲಿ ನೀಡಿದ ಉಪನ್ಯಾಸದ ವೇಳೆ ಅವರು ಹೇಳಿದ್ದರು.